ADVERTISEMENT

ಆದಿವಾಸಿಗಳ ಕಥೆ–ವ್ಯಥೆ: ‘ನಮ್ಮ ಪಾಡಿಗೆ ನಾವಿದ್ದ ದಿನಗಳು ಉಳಿದಿಲ್ಲ’

ಅತಂತ್ರ ಬದುಕಿನಲ್ಲಿ ದಿನಕಳೆಯುತ್ತಿರುವ ವನವಾಸಿಗರು

ಸಂಧ್ಯಾ ಹೆಗಡೆ
Published 17 ಮಾರ್ಚ್ 2019, 1:33 IST
Last Updated 17 ಮಾರ್ಚ್ 2019, 1:33 IST
ಮನೆಯ ದಾರಿಯ ಸರಿಗೋಲು ತೆಗೆಯುತ್ತಿದ್ದ ಸುಬ್ಬಿ ಸಿದ್ದಿ
ಮನೆಯ ದಾರಿಯ ಸರಿಗೋಲು ತೆಗೆಯುತ್ತಿದ್ದ ಸುಬ್ಬಿ ಸಿದ್ದಿ   

ಶಿರಸಿ: ‘ಭೌತಿಕವಾಗಿ ನಾವು ಬದುಕಿದ್ದೇವೆ. ಊಟ– ತಿಂಡಿ, ಕೆಲಸ ಎಲ್ಲವನ್ನೂ ಮಾಡುತ್ತೇವೆ. ಆದರೆ, ಮಾನಸಿಕವಾಗಿ ನಾವು ಎಂದೋ ಬದುಕನ್ನು ಕಳೆದುಕೊಂಡಿದ್ದೇವೆ. ಯಾವ ಗದ್ದಲವಿಲ್ಲದೇ ನಮ್ಮಪಾಡಿಗೆ ನಾವಿದ್ದ ದಿನಗಳು ಕಳೆದುಹೋಗಿವೆ. ಅದರ ಜತೆಗೇ ನಮ್ಮತನವೂ ಹೊರಟು ಹೋಗಿದೆ’ ಎನ್ನುತ್ತ ಕ್ಷಣಕಾಲ ಮೌನಕ್ಕೆ ಜಾರಿದರು ಸಿದ್ದಿ ಜನಾಂಗದ ಮುಖಂಡ ಶಾಂತಾರಾಮ ಸಿದ್ದಿ.

ಉತ್ತರ ಕನ್ನಡ ಜಿಲ್ಲೆ ಹಲವು ಬುಡಕಟ್ಟು ಸಮುದಾಯಗಳಿಗೆ ಆಶ್ರಯ ನೀಡಿದೆ. ಹಾಲಕ್ಕಿಗರು, ಕುಣಬಿಗರು, ಕುಂಬ್ರಿ ಮರಾಠಿ, ಗೌಳಿಗರು ಇಂದಿಗೂ ಬುಡಕಟ್ಟು ಜೀವನಶೈಲಿಯಲ್ಲಿಯೇ ಇದ್ದಾರೆ. ಆದರೆ, ಅಧಿಕೃತ ಪಟ್ಟಿಯಲ್ಲಿ ಸೇರಿದವರು ಸಿದ್ದಿ ಮತ್ತು ಗೊಂಡರು ಮಾತ್ರ.

ಅರಣ್ಯದ ನಡುವೆ ಇರುವ ಪುಟ್ಟ ಮನೆಯೊಂದೇ ಅವರ ಆಸ್ತಿ. ಹಲವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿ ಕೆಲಸಕ್ಕೆ ಹೋಗುತ್ತಾರೆ. ‘ಮೊದಲು ನಮ್ಮನ್ನು ಕೇಳುವವರಿರಲಿಲ್ಲ. ಕಾಡಿನ ಸಾಂಗತ್ಯದಲ್ಲಿ ಭಯವಿರಲಿಲ್ಲ. ಹಾಗೆಂದು ನಾವು ಎಂದಿಗೂ ಕಾಡನ್ನು ಬೇಕಾಬಿಟ್ಟಿ ಬಳಸಿಕೊಂಡಿಲ್ಲ. ಬದುಕಿಗಾಗುವಷ್ಟು ಕಿರುಅರಣ್ಯ ಉತ್ಪನ್ನಗಳ ಕೊಯ್ಲು ಮಾಡಿದರೆ, ಉಳಿದಿದ್ದನ್ನು ಪ್ರಾಣಿ– ಪಕ್ಷಿಗಳು ತಿನ್ನುತ್ತಿದ್ದವು. ಈಗ ಟೆಂಡರ್ ಅಡಿಯಲ್ಲಿ ನಮ್ಮ ಸ್ವಾತಂತ್ರ್ಯ ಉಳಿದಿಲ್ಲ’ ಎಂದ ಶಾಂತಾರಾಮ ಹಳೆಯ ನೆನಪಿಗೆ ಜಾರಿದರು.

ADVERTISEMENT

‘ಊಟಕ್ಕೆ ಅಕ್ಕಿ ಸಿಗದಿದ್ದರೆ ಹಲಸು, ಮರಗೆಣಸು, ಗೊಣ್ಣೆಗೆಣಸು ತಿಂದು ದಿನಗಟ್ಟಲೇ ಕಳೆದಿದ್ದೇವೆ. ಈಗ ನಿಸರ್ಗ ನೀಡುವ ಆಹಾರದಿಂದಲೂ ವಂಚಿತರಾಗಿದ್ದೇವೆ. 5 ಗುಂಟೆಯಿಂದ ಒಂದೆರಡು ಎಕರೆ ಭೂಮಿ ಅತಿಕ್ರಮಣ ಮಾಡಿಕೊಂಡವರೇ ಹೆಚ್ಚು. ನಮ್ಮಲ್ಲಿ 5 ಎಕರೆ ಅತಿಕ್ರಮಣ ಮಾಡಿದವರು ಬಹುಶಃ ಹುಡುಕಿದರೂ ಸಿಗಲಾರರು. ಅರಣ್ಯ ನಾಶದ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದಿದೆ. ದೊಡ್ಡ ಮರಗಳ ಕೆಳಗೆ ಮನೆ ಕಟ್ಟಿಕೊಂಡಿರುವ ಕಾರಣಕ್ಕೆ ಹಕ್ಕುಪತ್ರ ಕೊಡುವುದಿಲ್ಲ. ಇಲಾಖೆಯೇ ಮರ ಕಡಿಯಲು ಪ್ರೇರೇಪಿಸಿದಂತಾಗಿಲ್ಲವೇ’ ಎಂದು ಪ್ರಶ್ನಿಸಿದರು.

ಅರಣ್ಯ ಭೂಮಿಯಲ್ಲಿ ಸಿದ್ದಿಗಳು ಕಟ್ಟಿರುವ ಮನೆ ಚಿತ್ರ: ಸಂಧ್ಯಾ ಆಲ್ಮನೆ

‘ಮನೆಯ ಹಕ್ಕುಪತ್ರಕ್ಕಾಗಿ ಕಚೇರಿ ಅಲೆಯಲಾರಂಭಿಸಿ, ನಾಲ್ಕು ವರ್ಷ ಕಳೆದವು. ಯಜಮಾನರು ತೀರಿ ಹೋದರು. ಪ್ರತಿ ಬಾರಿ ಸಿಗುವುದು ಭರವಸೆ ಮಾತ್ರ’ ಎಂದು ಹತಾಶೆಯಿಂದ ಹೇಳಿದರು ಹೊನ್ನಳ್ಳಿಯ ಗೌರಿ ಸಿದ್ದಿ.

ಭಟ್ಕಳ ಸುತ್ತಮುತ್ತ ಜಾಲಿ, ಮಾರುಕೇರಿ, ಕಿತ್ರೆ, ಕೊಪ್ಪದಲ್ಲಿ ನೆಲೆಸಿರುವ ಗೊಂಡರ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಕೂಲಿ ಕೆಲಸವೇ ಅವರಿಗೆ ಜೀವನಾಧಾರ. ‘ಕಾಡು ಅವಲಂಬಿತರ ಮೇಲೆ ಅರಣ್ಯ ಕಾಯ್ದೆಗಳು ವ್ಯತಿರಿಕ್ತ ಪರಿಣಾಮ ಬೀರಿವೆ. ನೂರಾರು ವರ್ಷಗಳಿಂದ ಕಾಡಿನಲ್ಲಿದ್ದರೂ ವನವಾಸಿಗರ ಬಳಿ ದಾಖಲೆಗಳಿಲ್ಲ. ದಾಖಲೆ ಸೃಷ್ಟಿಸಬೇಕೆಂದು ಯೋಚಿಸದಷ್ಟು ಮುಗ್ಧರು ಅವರು. ಬುಡಕಟ್ಟು ಸಮುದಾಯವೆಂದು ಪರಿಗಣಿಸುವ ಎಲ್ಲ ಅಂಶಗಳ ಸಾಮ್ಯತೆಯಿರುವ ಹಲವಾರು ಜನಾಂಗಗಳು ಜಿಲ್ಲೆಯಲ್ಲಿವೆ’ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ಮಾಡಿರುವ ಡಾ.ವೆಂಕಟೇಶ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.