ADVERTISEMENT

ಭಯವೇ ಧರ್ಮದ ಮೂಲವಯ್ಯ ಎಂಬಂಥ ವಾತಾವರಣವಿದೆ: ನಟರಾಜ್ ಹುಳಿಯಾರ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:35 IST
Last Updated 10 ಸೆಪ್ಟೆಂಬರ್ 2022, 18:35 IST
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್   

ಬೆಂಗಳೂರು: ‘ಭಾರತದಲ್ಲಿ ದಯವೇ ಧರ್ಮದ ಮೂಲವಯ್ಯ’ ಎಂಬ ಮಾತುಇತ್ತು. ‘ಪ್ರಸ್ತುತ ಭಯವೇ ಧರ್ಮದ ಮೂಲವಯ್ಯ’ಎಂಬ ವಾತಾವರಣ ನಿರ್ಮಾಣವಾಗಿದೆ’ ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್ ಹುಳಿಯಾರ್ ಹೇಳಿದರು.

ಅಹಮ್ಮದೀಯ ಮುಸ್ಲಿಂ ಸಮುದಾಯದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಸ್ಥಿರ ಶಾಂತಿ ಸ್ಥಾಪಿಸುವ ಮೂಲತತ್ವಗಳು’ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್ ಜಾರಿ ತಂದ ಕಂದಾಯ ಪದ್ಧತಿ, ಇತರ ಸುಧಾರಣೆ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳೋಣ. ಅವರ ಮೂರ್ತಿ ನಾಶ ವೈಖರಿ ವಿರೋಧಿಸೋಣ’ ಎಂದರು.

‘ಲೋಹಿಯಾ ಅವರು ಹೇಳಿರುವಂತೆ ಕೇಡಿನ ಜೊತೆ ಅಲ್ಪಕಾಲ ಸಂಬಂಧ ಹೊಂದಿರಬೇಕು, ಶಾಂತಿಯ ಜೊತೆ ದೀರ್ಘಕಾಲಿನ ಸಂಬಂಧ ಹೊಂದಿರಬೇಕು’ ಎಂದರು.

ADVERTISEMENT

ಅಹಮ್ಮದೀಯ ಮುಸ್ಲಿಂ ಸಮುದಾಯದ ಕೆ.ಕೆ. ಬದ್ರುದ್ದೀನ್ ಮಾತನಾಡಿ, ‘ಕುರಾನಿನ ಯಾವುದೇ ಅಧ್ಯಾಯದಲ್ಲಿ ಹಿಂಸೆ, ಖಡ್ಗ ಕತ್ತಿಯ ಸಂಸ್ಕೃತಿಯನ್ನು ಹೇಳಿಲ್ಲ. ಇಸ್ಲಾಮಿಕ್ ಅಂತರ್ಗತದಲ್ಲಿ ಅಡಗಿರುವ ಶಾಂತಿ, ಕರುಣಾಮಯಿ ಬದುಕಿನ ಬಗ್ಗೆ ಹೇಳಿದೆ. ವಿಶ್ವದಲ್ಲಿ ಯಾವಾಗ ಶಾಂತಿ ಸ್ಥಾಪನೆ ಆಗುವುದಿಲ್ಲವೋ ಅಲ್ಲಿಯವರೆಗೂ ಶಾಂತಿಯುತ ಬದುಕು ಕಾಣಲು ಸಾಧ್ಯವಿಲ್ಲ. ಧರ್ಮಗಳ ನಡುವೆ ಇಟ್ಟಿಗೆಯಿಂದ ಕಟ್ಟಿದ ಗೋಡೆಯ ರೀತಿ ಕಟ್ಟುಪಾಡುಗಳು ಇರಬಾರದು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್‌ ಮಾತನಾಡಿ, ‘ಕೋಮುಗಳ ಮಧ್ಯೆ ನಡೆಯುವ ಸಂಘರ್ಷದಿಂದ ನಾವು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಕರ್ಫ್ಯೂನಂಥ ನಿಬಂಧನೆಗಳಿಂದ ಕುಟುಂಬಗಳು ಅನುಭವವಿಸುವ ನೋವು ಯಾರಿಗೂ ಬೇಕಿಲ್ಲ’ ಎಂದರು.

ಅಹಮ್ಮದೀಯ ಮುಸ್ಲಿಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ತಾರಿಖ್ ಅಹಮದ್, ಪತ್ರಕರ್ತೆ ಅನೂಷ ರವಿ ಸೂದ್, ಜಕ್ಕೂರು ಅಹ್ಮದೀಯ ಮುಸ್ಲಿಂ ಸಮುದಾಯದ ಅಧ್ಯಕ್ಷ ಮಹ್ಮದ್‌ ಇರ್ಫಾನ್ ಸೇರಿ ವಿವಿಧ ಸಮುದಾಯಗಳ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.