ADVERTISEMENT

ಗ್ರಾ.ಪಂ ಸಿಬ್ಬಂದಿಗೆ ‘ಡಿ’ ದರ್ಜೆ ಸ್ಥಾನವೂ ಇಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 20:42 IST
Last Updated 14 ಫೆಬ್ರುವರಿ 2023, 20:42 IST
   

ಬೆಂಗಳೂರು: ಗ್ರಾಮ ಪಂಚಾಯತಿ ಸಿಬ್ಬಂದಿಗೆ ’ಡಿ’ ಗ್ರೂಪ್ ನೌಕರರ ಸ್ಥಾನ ನೀಡಲು ಅವಕಾಶವಿಲ್ಲ. ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯ ವಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಲಿಖಿತ ಹೇಳಿಕೆಯನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಓದಿದರು.

ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ಕರ ಸಂಗ್ರಹ ಕಾರ, ನೀರುಗಂಟಿ, ಸ್ವಚ್ಛತಾ ಕಾರ್ಮಿಕರು, ಅಟೆಂಡರ್‌, ಡೇಟಾ ಎಂಟ್ರಿ ಆಪರೇಟರ್‌ಗಳು ಸರ್ಕಾರಿ ನೌಕರರಲ್ಲ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಸ್ಥಳೀಯ ಪ್ರಾಧಿಕಾರವಾಗಿದೆ. ಮಂಜೂರಾದ ಹುದ್ದೆಗಳಿಗೆ ನಿಯಮದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸ್ಥಳೀಯ ಪಂಚಾಯಿತಿಗಳ ಸಂಪನ್ಮೂಲಗಳಿಂದಲೇ ಅವರ ವೇತನ ನೀಡಲಾಗುತ್ತಿದೆ. ರಾಜ್ಯದ ಹಲವು ಪಂಚಾಯಿತಿಗಳಲ್ಲಿ ಸಂಪನ್ಮೂಲ ಕೊರತೆಯಿಂದ ಸಿಬ್ಬಂದಿ ವೇತನ ಪಾವತಿ ವಿಳಂಬವಾಗುತ್ತಿದೆ. ಹಾಗಾಗಿ, ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ₹ 811 ಕೋಟಿ ನೀಡಲಾಗಿದೆ. ಅತ್ಯಂತ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಜುಲೈ 2022ರಿಂದ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ₹ 13,811–16,957ರ ಮೂಲವೇತನ ವೇತನ, ತುಟ್ಟಿಭತ್ಯೆ ನಿಗದಿ ಮಾಡಿದೆ. ಸಾಂದರ್ಭಿಕ ರಜೆ, ಗಳಿಕೆ ರಜೆ, ಪ್ರಸೂತಿ, ಪಿತೃತ್ವ ರಜೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.

ADVERTISEMENT

ಪಂಚಾಯಿತಿ ಸಿಬ್ಬಂದಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಅವರ ಅವಲಂಬಿತರನ್ನು ನೇಮಕ ಮಾಡಿಕೊಳ್ಳಲು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.