ADVERTISEMENT

ಗದ್ದಲದ ನಡುವೆ ಸಿ.ಎಂ ಉತ್ತರ, ಧನವಿನಿಯೋಗ ಮಸೂದೆಗೆ ಅಂಗೀಕಾರ

ಪರಿಷತ್‌ನಲ್ಲಿ ಚರ್ಚೆಗೆ ಸಿಗದ ಅವಕಾಶ: ಸಿ.ಡಿ ಹಿಡಿದು ಕಾಂಗ್ರೆಸ್‌ ಸದಸ್ಯರ ಧರಣಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 11:36 IST
Last Updated 24 ಮಾರ್ಚ್ 2021, 11:36 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಬಿಜೆ‍ಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರ ಧರಣಿ, ಆಡಳಿತ– ವಿರೋಧ ಪಕ್ಷದ ನಡುವಿನ ಗದ್ದಲದಿಂದ ಮಹತ್ವದ ವಿಷಯಗಳ ಚರ್ಚೆಗೆ ಅವಕಾಶ ಸಿಗಲಿಲ್ಲವೆಂದು ಜೆಡಿಎಸ್ ಸದಸ್ಯರು ಕಲಾಪ ಬಹಿಷ್ಕರಿಸಿದ ನಡುವೆಯೇ ಪ್ರಸಕ್ತ ಸಾಲಿನ ಧನವಿನಿಯೋಗ ಮಸೂದೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡಿತು.

ಸಭಾಪತಿ ಪೀಠದ ಎದುರು ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸುತ್ತಿದ್ದಾಗಲೇ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಧನ ವಿನಿಯೋಗ ಮಸೂದೆ ಮಂಡಿಸಿದರು.

ಅದಕ್ಕೂ ಮೊದಲು ಬಜೆಟ್‌ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಸಾಕಷ್ಟು ಸಂಖ್ಯೆಯಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ವಿರೋಧ ಪಕ್ಷ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಹೋಗುವುದಿಲ್ಲ. ಎಲ್ಲ ವರ್ಗದ ಹಿತವನ್ನು ಗಮನದಲ್ಲಿಟ್ಟು ಅಭಿವೃದ್ಧಿ ಪರ ಬಜೆಟ್‌ ಮಂಡಿಸಿದ್ದೇನೆ’ ಎಂದು ಬಜೆಟ್‌ನ ಭಾಷಣದ ಪ್ರತಿ ಮಂಡಿಸಿದರು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಸೂದೆಗಳಿಗೂ ಧ್ವನಿಮತದ ಮೂಲಕ ಪರಿಷತ್ ಅಂಗೀಕಾರ ನೀಡಿತು.

ADVERTISEMENT

ಬೆಳಿಗ್ಗೆ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ಮುಗಿಯುತ್ತಿದ್ದಂತೆ ಸಿ.ಡಿ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಎಸ್‌. ಆರ್. ಪಾಟೀಲ ಪಟ್ಟು ಹಿಡಿದರು. ‘ನಿಯಮ 59ರ ಅಡಿ ಚರ್ಚೆಗೆ ನಾವು ಮಾರ್ಚ್‌ 22ರಂದೇ ಮನವಿ ಮಾಡಿದ್ದೇವೆ. ನೀವು 68ರ ಅಡಿ ಚರ್ಚೆಗೆ ಅವಕಾಶ ಕೊಟ್ಟಿದ್ದೀರಿ. ಈಗಲೇ ಚರ್ಚೆ ತೆಗೆದುಕೊಳ್ಳಿ’ ಎಂದು ಸಭಾಪತಿಗೆ ಅವರು ಆಗ್ರಹಿಸಿದರು.

‘ಕಾರ್ಯಸೂಚಿಯಂತೆ ಕಲಾಪ ಮುಗಿಸಬೇಕಿದೆ. ನಂತರ ಚರ್ಚೆಗೆ ಅವಕಾಶ ಕೊಡುತ್ತೇನೆ’ ಎಂದು ಸಭಾಪತಿ ಹೇಳಿದರು. ಆಗ ಪಾಟೀಲ, ‘ಸಿ.ಡಿಯನ್ನು ಜಗತ್ತು ನೋಡಿದೆ. ಈಗಾಗಲೇ ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಆಗಿದೆ.‌ ಇಲ್ಲೂ ಅವಕಾಶ ಕೊಡಿ. ಇದು ಅತ್ಯಂತ ಜರೂರು ಮತ್ತು ಮಹತ್ವದ ವಿಚಾರ’ ಎಂದರು.

ಚರ್ಚೆಗೆ ಅವಕಾಶ ಸಿಗದೇ ಇದ್ದಾಗ, ಕೈಯಲ್ಲಿ ಸಿ.ಡಿ ಹಿಡಿದುಕೊಂಡು ಸಭಾಪತಿ ಪೀಠದ ಎದುರು ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು. ‘ಬಿಜೆಪಿಗೆ ಧಿಕ್ಕಾರ, ಡೌನ್ ಡೌನ್ ಬಿಜೆಪಿ’ ಎಂದು ಘೋಷಣೆ ಕೂಗಿದರು. ‘ನೀತಿ, ನಾಚಿಕೆ ಇಲ್ಲದ ಸರ್ಕಾರ ಇದು’ ಎಂದೂ ದೂರಿದರು. ಅತ್ತ ಬಿಜೆಪಿ ಸದಸ್ಯರು, ‘ಸಿಡಿ ಮಾಡಿದ ಕಾಂಗ್ರೆಸ್ ಗೆ ಧಿಕ್ಕಾರ’ ಎಂದು ಕೂಗಿದರು. ಗದ್ದಲ ಮುಂದುವರಿದಾಗ ಸಭಾಪತಿ ಕಲಾಪವನ್ನು 10 ನಿಮಿಷ ಮುಂದೂಡಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಧರಣಿ ಮುಂದುವರಿಸಿದರು. ಗದ್ದಲದ ನಡುವೆಯೇ ಬಜೆಟ್‌ ಮೇಲಿನ ಚರ್ಚೆಗೆ ಯಡಿಯೂರಪ್ಪ ಉತ್ತರ ನೀಡಿದರು. ಕಾಂಗ್ರೆಸ್ ಸದಸ್ಯರ ಧರಣಿ ಮತ್ತು ಆಡಳಿತ ಬಿಜೆಪಿಯ ನಿಲುವಿಗೆ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಆಕ್ಷೇಪಿಸಿದರು.
‌‘ಶಿಕ್ಷಕರ ಸಮಸ್ಯೆ ಸೇರಿ‌ ಜ್ವಲಂತ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ. ಬಜೆಟ್ ಮೇಲೂ ಮಾತನಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಧೋರಣೆ ಖಂಡಿಸಿ ಕಲಾಪವನ್ನು ಬಹಿಷ್ಕರಿಸುತ್ತೇವೆ‘ ಎಂದು ಜೆಡಿಎಸ್‌ ಸದಸ್ಯರ ಜೊತೆ ಸದನದಿಂದ ಅವರು ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.