ADVERTISEMENT

ಸುಪ್ರೀಂಗೆ ಹೋದರೂ ಪ್ರಯೋಜನ ಇಲ್ಲ, ಗೌರವಯುತವಾಗಿ ರಾಜೀನಾಮೆ ಕೊಡಿ: ಎಚ್ ವಿಶ್ವನಾಥ್

ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 12:38 IST
Last Updated 24 ಸೆಪ್ಟೆಂಬರ್ 2024, 12:38 IST
<div class="paragraphs"><p>ಸಿದ್ದರಾಮಯ್ಯ ಮತ್ತು ವಿಶ್ವನಾಥ್</p></div>

ಸಿದ್ದರಾಮಯ್ಯ ಮತ್ತು ವಿಶ್ವನಾಥ್

   

ಮೈಸೂರು: ಸಿದ್ದರಾಮಯ್ಯ ಸುಪ್ರೀಂ ಕೋರ್ಟ್‌ಗೆ ಹೋದರೂ ಅಲ್ಲಿಯೂ ಮುಖಭಂಗ ಅನುಭವಿಸುವುದು ಖಚಿತ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್‌ ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪು ಕುರಿತು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ ಹೈಕೋರ್ಟ್‌ ತೀರ್ಪು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಈಗ ಹಠ ಮಾಡುವುದರಿಂದ ಮತ್ತೆ ವೇದನೆಗೆ ಒಳಗಾಗುತ್ತೀರಿ. ಆ ಪರಿಸ್ಥಿತಿ ಬರುವುದು ಬೇಡ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಮಾರ್ಗದರ್ಶನ ನೀಡಿ’ ಎಂದು ಹೇಳಿದರು.

ADVERTISEMENT

‘ ಸಿದ್ದರಾಮಯ್ಯ ಕುಟುಂಬ ಮುಡಾದಿಂದ ಪಡೆದ 14 ನಿವೇಶನಗಳನ್ನು ಹಿಂತಿರುಗಿಸಿ ತನಿಖೆ ಎದುರಿಸಲು ಈ ಹಿಂದೆಯೇ ಸಲಹೆ ನೀಡಿದ್ದೆ. ಆದರೆ ಅವರು ಅದನ್ನು ಧಿಕ್ಕರಿಸಿದ್ದರು. ಪಕ್ಕದಲ್ಲಿರುವವರ ಬುದ್ಧಿವಾದವನ್ನು ಕೇಳಿ ತಮ್ಮ 50 ವರ್ಷದ ರಾಜಕೀಯವನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ. ಕುರುಬರೂ ಸೇರಿದಂತೆ ಅಹಿಂದ ಸಮುದಾಯಗಳು ಅವರನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದವು. ಆದರೆ ಸಿದ್ದರಾಮಯ್ಯ ದುರಂಹಕಾರ, ಧೋರಣೆಗಳ ಮೂಲಕ ಈ ಸಮುದಾಯಗಳಿಗೆ ಮಸಿ ಬಳೆದಿದ್ದಾರೆ. ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳು ಈ ರಾಜ್ಯದ ಘನತೆ ಎತ್ತಿ ಹಿಡಿದಿದ್ದರು. ಅದನ್ನು ಮಣ್ಣುಪಾಲು ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.