ಬೆಳಗಾವಿ: ಜಿಲ್ಲೆಯಲ್ಲಿ ಮಲಪ್ರಭಾ ನದಿ ಪ್ರವಾಹ ಉಂಟಾಗಿ ವರ್ಷವೇ ಸಮೀಪಿಸುತ್ತಿದೆ. ಆದರೆ, ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದ ಎರಡು ಕುಟುಂಬಗಳಿಗೆ ಮನೆ ಮರು ನಿರ್ಮಾಣಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಅವರು ಅಲ್ಲಿನ ಚಿಕ್ಕೂರಮ್ಮ ದೇವಸ್ಥಾನದಲ್ಲಿ ಜೀವನ ನಡೆಸುತ್ತಿದ್ದು, ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತು ಹೋಗಿದ್ದಾರೆ.
ಶಾಂತವ್ವ ಮುದಕವಿ ಹಾಗೂ ಗಂಗವ್ವ ಬಾರಕೇರ ದಂಪತಿಗೆ ಸರ್ಕಾರದ ನೆರವು ಸಿಕ್ಕಿಲ್ಲ. ದೇಗುಲವೇ ಅವರಿಗೆ ಸೂರಾಗಿದೆ. ಅವರ ಕಷ್ಟ ಕಂಡು ಮರುಗುವ ಊರವರು, ದೇಗುಲ ಖಾಲಿ ಮಾಡುವಂತೆ ಪಟ್ಟು ಹಿಡಿದಿಲ್ಲ.
‘ಪ್ರಜಾವಾಣಿ’ಯಲ್ಲಿ ಫೆಬ್ರುವರಿಯಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ, ದೇಗುಲದಲ್ಲಿದ್ದ 7 ಕುಟುಂಬಗಳಿಗೆ ಪರಿಹಾರ ಸಿಕ್ಕಿದ್ದು ಅವರು ಮನೆಗಳ ದುರಸ್ತಿ ಮಾಡಿಕೊಂಡು ತೆರಳಿದ್ದಾರೆ. ಆದರೆ, ಈ 2 ಕುಟುಂಬದವರ ಬದುಕು ಮಾತ್ರ ಇನ್ನೂ ಅತಂತ್ರವಾಗಿದೆ.
ತಗಡಿನ ಶೀಟು ಪೊಲೀಸರ ಪಾಲು!
ಅವರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ಸಿಕ್ಕಿದ್ದು ಹಳೆಯ ತಗಡಿನ ಶೀಟುಗಳು ಮಾತ್ರ. ಬಿದ್ದಿರುವ ಮನೆಯ ಆವಶೇಷಗಳನ್ನು ತೆರವುಗೊಳಿಸಿ ಅಲ್ಲಿ ತಗಡಿನಿಂದ ಶೆಡ್ ಹಾಕಿಕೊಳ್ಳುವುದಕ್ಕೆ ಚೈತನ್ಯವಿಲ್ಲ. ಬಳಕೆಯಾಗದೆ ಬಿದ್ದಿದ್ದ ಶೀಟುಗಳನ್ನು ಪೊಲೀಸರು ಈಚೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲಗತ್ತಿ ಕ್ರಾಸ್‌ನಲ್ಲಿ ಮಾಡಿದ್ದ ಚೆಕ್‌ಪೋಸ್ಟ್‌ಗೆ ಬಳಸಿದ್ದಾರಂತೆ! ಗುಡಿಯ ಚಿಕ್ಕ ಹಾಲ್‌ನಲ್ಲೇ ಈ ಕುಟುಂಬಗಳು ದಿನ ದೂಡುತ್ತಿವೆ.
ವೃದ್ಧಾಪ್ಯದ ಕಾರಣದಿಂದಾಗಿ ಅವರಿಗೆ ದುಡಿಯುವುದಕ್ಕೆ ಆಗುವುದಿಲ್ಲ. ಬಿಪಿಎಲ್ ಪಡಿತರ ಚೀಟಿ ಇದೆ. ಅನ್ನಭಾಗ್ಯ ಯೋಜನೆಯಲ್ಲಿ ಸಿಗುವ ಪಡಿತರವೇ ಅವರಿಗೆ ಆಧಾರ. ಒಂದು ಕುಟುಂಬದ ಬಳಿ ಅಡುಗೆ ಅನಿಲ ಸಿಲಿಂಡರ್ ಇದೆ. ಇನ್ನೊಂದು ಕುಟುಂಬದವರು ದೇವಸ್ಥಾನದ ಹೊರಗೆ ಸೌದೆ ಒಲೆ ಹಾಕಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಸ್ನಾನ, ಶೌಚಕ್ರಿಯೆಗೆ ಬಯಲನ್ನೇ ಆಶ್ರಯಿಸಬೇಕಾದ ಹಾಗೂ ಮುಜುಗರ ಅನುಭವಿಸಬೇಕಾದ ದುಃಸ್ಥಿತಿ ಅವರದಾಗಿದೆ.
ಮನವಿ ಕೊಟ್ಟು ಸಾಕಾಗಿದೆ
‘ಮನೆ ಮರು ನಿರ್ಮಾಣಕ್ಕೆ ಇನ್ನೂ ಪರಿಹಾರ ಬಂದಿಲ್ಲ. ಬಾಡಿಗೆ ಹಣವೂ ಬಂದಿಲ್ಲ. ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಶಾಸಕರ ಬಳಿಗೂ ಹೋಗಿ ಕಾಲಿಗೆ ಬಿದ್ದಿದ್ದೆ. ನಂತರ ಪಂಚಾಯಿತಿಯವರು 8 ಹಳೆಯ ತಗಡು ಕೊಟ್ಟಿದ್ದರು. ಮನೆ ಬಿದ್ದ ಸ್ಥಳದಲ್ಲಿ ಕಲ್ಲು–ಮಣ್ಣು ತೆಗೆಸುವುದಕ್ಕೂ ಹಣವಿಲ್ಲ. ನಾವೇ ಮಾಡಿಕೊಳ್ಳುವುದಕ್ಕೆ ಶಕ್ತಿ ಇಲ್ಲ. ಇಷ್ಟು ಕಷ್ಟವಿದ್ದರೂ ಪರಿಹಾರ ಬಂದಿಲ್ಲವೇಕೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವಿನ್ನೇಕೆ ಬದುಕಿರಬೇಕು ಎನಿಸಿಬಿಟ್ಟಿದೆ’ ಎಂದು ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಅಳಲು ತೋಡಿಕೊಂಡರು.
‘ಅಧಿಕಾರಿಗಳು ಬಂದು ನೋಡಿದ್ದರು. ಅಯ್ಯೋ ಪಾಪ ಎಂದಿದ್ದರು. ಅದರಿಂದ ಅನುಕೂಲವೇನೂ ಆಗಿಲ್ಲ. ವಯಸ್ಸಾಗಿರುವ ನಾವು ಕೆಲಸಕ್ಕೆ ಹೋಗಲಾಗುವುದಿಲ್ಲ. ಪತಿಗೆ ದೃಷ್ಟಿ ಹೋಗಿದೆ. ವೃದ್ಧಾಪ್ಯ ವೇತನ ಹಾಗೂ ಪಡಿತರ ನಂಬಿ ಜೀವನ ನಡೆಸುತ್ತಿದ್ದೇವೆ. ಮನೆ ಬಿದ್ದು ಹತ್ತು ತಿಂಗಳಾದವು. ಎಷ್ಟು ದಿನವೆಂದು ದೇವಸ್ಥಾನದಲ್ಲಿರುವುದು? ಬಿದ್ದ ಮನೆಯ ಜಾಗ ಹಸನು ಮಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟರು.
ಪ್ರತಿಕ್ರಿಯೆಗೆ ತಹಶೀಲ್ದಾರ್ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.