ADVERTISEMENT

’ಬಫರ್‌ ವಲಯ ಇಳಿಕೆಯಿಂದ ಜಲಾಶಯಕ್ಕೆ ಧಕ್ಕೆ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 16:26 IST
Last Updated 11 ಅಕ್ಟೋಬರ್ 2023, 16:26 IST

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಬಫರ್‌ ವಲಯ–3 ಮತ್ತು 4  ಅನ್ನು ಇಳಿಸುವುದರಿಂದ ಟಿ.ಜಿ.ಹಳ್ಳಿ ಜಲಾಶಯದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಟಿ.ಜಿ.ಹಳ್ಳಿ ಜಲಾಶಯದಿಂದ ಬೆಂಗಳೂರಿನ ಪಶ್ಚಿಮ ಭಾಗಗಳಿಗೆ ಸುಮಾರು ಒಂದು ಶತಮಾನದಿಂದ ಕುಡಿಯುವ ನೀರು ಒದಗಿಸುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಜಲಾಶಯಕ್ಕೆ ಸುಮಾರು 1.5 ಟಿಎಂಸಿ ಅಡಿ ನೀರು ತರಲಾಗುತ್ತದೆ. ಈ ಮಧ್ಯೆ ಬಫರ್ ವಲಯವನ್ನು 500 ಮೀಟರ್‌ಗೆ ಇಳಿಸುವುದಾಗಿ ಡಿ.ಕೆ.ಶಿವಕುಮಾರ್‌ ಹೇಳಿಕೆ ಖಂಡನೀಯ ಎಂದಿದ್ದಾರೆ.

‘ಈ ಹಿಂದೆ ಬಫರ್‌ ವಲಯದಲ್ಲಿ ಡಿಎಲ್‌ಎಫ್‌ ಸಂಸ್ಥೆ ಕಟ್ಟಲು ಉದ್ದೇಶಿಸಿದ್ದ ಡಿಎಲ್‌ಎಫ್‌ ವಸತಿ ಸಮುಚ್ಚಯದ ವಿರುದ್ಧ 1992 ರಲ್ಲಿ ನಾವು ಹೋರಾಟ ಮಾಡಿದ್ದೆವು. ನಂತರ ಕುಮುದ್ವತಿ ದಂಡೆಯ ಮೇಲೆ ನಿರ್ಮಾಣವಾಗುತ್ತಿದ್ದ ಖಾಸಗಿ ವೈದ್ಯಕೀಯ ಕಾಲೇಜು ಕಟ್ಟಡದ ವಿರುದ್ಧವೂ 1998–99 ರಲ್ಲಿ ಹೋರಾಟ ಮಾಡಿ ಅದನ್ನು ನಿಲ್ಲಿಸಲಾಗಿತ್ತು’ ಎಂದು ಹೇಳಿದ್ದಾರೆ.

ADVERTISEMENT

ಜಲಾಶಯದ ಸುತ್ತಮುತ್ತಲಿನ ಜಾಗವನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚಿನ ಕ್ರಮದ ಅಗತ್ಯವಿದೆ. ಪರಿಸರ ವಿರೋಧಿ  ಕ್ರಮದ ಯೋಚನೆಯನ್ನೂ ಮಾಡಬಾರದು. ಅವರು ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.