ಬೆಂಗಳೂರು: ‘ಶೇಕಡ 40ರಷ್ಟು ಕಮಿಷನ್ ಹೆಸರಿನಲ್ಲಿ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನೇರವಾಗಿ ಶೇ 50ರಷ್ಟು ಕಮಿಷನ್ ಸರ್ಕಾರ ನಡೆಸುತ್ತಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಣ್ಣಪುಟ್ಟ ಕೆಲಸಗಳಿಗೂ ವಸೂಲಿ ಮಾಡಲಾಗುತ್ತಿದೆ. ವರ್ಗಾವಣೆ ದಂಧೆ ಇನ್ನೂ ನಿಂತಿಲ್ಲ’ ಎಂದರು.
ಕಮಿಷನ್ ಆರೋಪದ ಕುರಿತು ತನಿಖೆಗೆ ಸರ್ಕಾರ ಆಯೋಗವನ್ನು ನೇಮಿಸಿದೆ. ಆಯೋಗವು ಪ್ರಾಮಾಣಿಕವಾಗಿ ಎಲ್ಲರ ಅವಧಿಯ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಆರು ತಿಂಗಳಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ. ಆರು ತಿಂಗಳೊಳಗೆ ಈ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಪಡೆಯುವುದಕ್ಕೆ ಸರ್ಕಾರದ ಕೆಲಸ ಸೀಮಿತವಾಗಿದೆ’ ಎಂದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಪೂರೈಸುತ್ತಿರುವ ತಲಾ ಐದು ಕೆ.ಜಿ. ಅಕ್ಕಿಯ ವಿತರಣೆಯನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ. ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆ ಎಂದು ದೂರಿದರು.
ಗೃಹ ಲಕ್ಷ್ಮಿ ಯೋಜನೆಯಡಿ ಹಣ ಪಾವತಿ ಶೇ 35ರಷ್ಟನ್ನು ದಾಟಿಲ್ಲ. ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸರ್ಕಾರ ವಿಫಲವಾಗಿದೆ. ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿ ಅನ್ನದಾತರನ್ನು ಅವಮಾನಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರದ ಸಾಲದ ಪ್ರಮಾಣ ಹೆಚ್ಚಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳ ₹11,000 ಕೋಟಿ ಅನುದಾನವನ್ನೂ ಬೇರೆ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ಸದನದಲ್ಲೇ ಮಾಹಿತಿ ಒದಗಿಸುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.