ADVERTISEMENT

ಮಠದ ಒಳಗಿರುವವರೇ ಷಡ್ಯಂತ್ರ ನಡೆಸಿದ್ದಾರೆ: ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 20:05 IST
Last Updated 27 ಆಗಸ್ಟ್ 2022, 20:05 IST
   

ಚಿತ್ರದುರ್ಗ: ‘ಮಠದ ಒಳಗಿರುವವರೇ ಷಡ್ಯಂತ್ರ, ಪಿತೂರಿ ನಡೆಸಿದ್ದಾರೆ. ಈ ಸಮಸ್ಯೆ ಶಾಶ್ವತವಲ್ಲ. ಯಾರೊಬ್ಬರೂ ದುಃಖಪಡಬೇಡಿ’ ಎಂದು ಶಿವಮೂರ್ತಿ ಮುರುಘಾ ಶರಣರು ಭಕ್ತರಿಗೆ ಕೋರಿದ್ದಾರೆ.

ಮಠದಲ್ಲಿ ಶನಿವಾರ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ. ಸಾಧ್ಯವಾದರೆ ಸಮಸ್ಯೆ ಬಗೆಹರಿಸಿಕೊಳ್ಳೋಣ, ಇಲ್ಲವೇ ಹೋರಾಡೋಣ. ಎರಡೂ ವಿಚಾರಕ್ಕೂ ನಾವು ಸಿದ್ಧ. ಸಮರ ಹಾಗೂ ಸಂಧಾನದ ಹಾದಿಗಳು ನಮ್ಮ ಎದುರು ಇವೆ’ ಎಂದು ಹೇಳಿದರು.

ADVERTISEMENT

‘ರೋಲ್‌ಕಾಲ್, ಬ್ಲ್ಯಾಕ್‌ಮೇಲ್ ತಂತ್ರದ ಮೂಲಕ ಅಧಿಕಾರ ಬೇಕು ಎಂಬ ಧೋರಣೆ ಇಲ್ಲಿ ಮುಖ್ಯವಾಗಿದೆ. ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ಎದುರಾಗುತ್ತದೆ. ಗಾಂಧಿ, ಬಸವಣ್ಣ ಅವರೂ ನೋವಿನ ದಿನಗಳನ್ನು ಎದುರಿಸಿದ್ದಾರೆ’ ಎಂದರು.

‘ಎಲ್ಲ ಸಮಾಜ ಸುಧಾರಕರ ಕಾಲದಲ್ಲಿಯೂ ಸಾತ್ವಿಕ ಶಕ್ತಿ ಮತ್ತು ದುಷ್ಟಶಕ್ತಿಯ ನಡುವೆ ಹೋರಾಟ ನಡೆದಿವೆ. ಸಾತ್ವಿಕರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ಅನೇಕರು ನಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಏಸುಕ್ರಿಸ್ತರಿಗೆ ಶಿಲುಬೆಗೆ ಏರಿಸಿದವರು ಅದೇ ಧರ್ಮದವರು. ಪೈಗಂಬರರಿಗೆ ಕಿರುಕುಳ ನೀಡಿದವರು, ಗೌತಮ ಬುದ್ಧನಿಗೆ ಹಂದಿಯ ಮಾಂಸದ ರಸ ಉಣಿಸಿದವರು ಅದೇ ಧರ್ಮದವರು’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.