ಹುಬ್ಬಳ್ಳಿ: ‘ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರ ಇದ್ದವರ ವಿರುದ್ಧ ಕಾಂಗ್ರೆಸ್ ಪಕ್ಷ ಇದೆ. ನಾವು ಟಿಪ್ಪು ಸುಲ್ತಾನ್ ಪರ ಎಂದು ಹೇಳುವವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದವರು. ಅವರಿಂದ ನಾವು ಪಾಠ ಕಲಿಯಬೇಕಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮ ಪಕ್ಷದ ಧ್ಯೇಯ. ನಮ್ಮದು ಜ್ಯಾತ್ಯತೀತ ರಾಷ್ಟ್ರ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು. ಬಿಜೆಪಿಯವರು ಗೋಡ್ಸೆ ಅನುಯಾಯಿಗಳು’ ಎಂದು ಆರೋಪಿಸಿದರು.
‘ಶಾಲಾ ಕಾಲೇಜುಗಳಲ್ಲಿ ಸಮಾನತೆ ತರಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಸಮಾಜದಲ್ಲಿ ಸಮಾನತೆ ಬಗ್ಗೆ ಅವರು ಮಾತನಾಡುವುದಿಲ್ಲ. ಮಹಿಳಾ ಕುಸ್ತಿಪಟುಗಳು ಕಣ್ಣೀರು ಹಾಕಿದರೂ ಅವರು ತಲೆಕೆಡಿಸಿಕೊಂಡಿಲ್ಲ. ಅವರು ಮೊದಲು ತಮ್ಮ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ’ ಎಂದು ಹರಿಹಾಯ್ದರು.
‘ಆಹಾರ ಮತ್ತು ಉಡುಪು ಸಂವಿಧಾನ ಬದ್ಧವಾಗಿ ಬಂದಿರುವ ಹಕ್ಕು. ಹಿಜಾಬ್ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ತೀರ್ಪು ಬಂದ ನಂತರ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಹಿಜಾಬ್ ಮತ್ತು ಬುರ್ಖಾಗೆ ವ್ಯತ್ಯಾಸ ಇದೆ. ಶಾಲೆ, ಕಾಲೇಜಿನ ಕಾಂಪೌಂಡ್‌ವರೆಗೂ ಬುರ್ಖಾ ಧರಸಿ ಬರಬಹುದು. ನಂತರ ಹಿಜಾಬ್ ಧರಿಬಹುದು ಎಂಬುದು ನನ್ನ ಅಭಿಪ್ರಾಯ’ ಎಂದರು.
‘ಬಹುಸಂಖ್ಯಾತರ ತುಷ್ಟೀಕರಣ ಮಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಹಿಂಸೆ, ಸುಳ್ಳು ಹರಡುತ್ತಿದೆ. ಅಲ್ಪಸಂಖ್ಯಾತರು, ಮೀಸಲಾತಿ ವಿರುದ್ಧ ಮಾತನಾಡುವವರು ಈ ಪಕ್ಷದಲ್ಲೇ ಇದ್ದಾರೆ. ನಾಗ್ಪುರದಲ್ಲಿರುವ ಇದರ ಸೂತ್ರದಾರರು ಜಾತಿ ಜನಗಣತಿ ವಿರುದ್ಧ ಮಾತನಾಡಿದರು. ಜನರಿಂದ ವಿರೋಧ ವ್ಯಕ್ತವಾದ್ದರಿಂದ ಈಗ ಸುಮ್ಮನಾಗಿದ್ದಾರೆ’ ಎಂದು ಹೇಳಿದರು.
‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನೂ ಆಕಾಂಕ್ಷಿ. ಆದರೆ, ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಇಂಡಿಯಾ ಮೈತ್ರಿಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬರುತ್ತಿರುವುದು ಸಂತಸದ ವಿಚಾರ’ ಎಂದರು.
‘ಈಚೆಗೆ ನಡೆದ ಈಡಿಗ ಸಮಾಜದ ಸಮಾವೇಶದಿಂದ ನನ್ನನ್ನು ಯಾರೂ ದೂರ ಇಟ್ಟಿಲ್ಲ. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಜಾತ್ಯತೀತ ತತ್ವದಲ್ಲಿ ನನಗೆ ನಂಬಿಕೆ ಇದೆ. ಹೀಗಾಗಿ ಸಮಾವೇಶಕ್ಕೆ ನನ್ನನ್ನು ಕರೆದರೂ ನಾನೇ ದೂರ ಇದ್ದೆ’ ಎಂದು ಹೇಳಿದರು.
‘ಹಿಂದುಳಿದ ವರ್ಗಗಳ 197 ಕಾಯಕ ಸಮಾಜಗಳಲ್ಲಿ ಕೆಲವೇ ಸಮಾಜಗಳನ್ನು ಹೊರತುಪಡಿಸಿದರೆ ಉಳಿದವರಿಗೆ ಕನಿಷ್ಠ ಸರ್ಕಾರಿ ನೌಕರಿಯೂ ಸಿಕ್ಕಿಲ್ಲ. ಅವರ ಪರ ಹೋರಾಟ ಆಗಬೇಕು. ಧ್ವನಿ ಇಲ್ಲದವರ ಪರವಾಗಿ ಸಮಾವೇಶ ಮಾಡಬೇಕು ಎಂಬ ತೀರ್ಮಾನ ಕೈಗೊಂಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.