ಬೆಂಗಳೂರು: ನಗರದಲ್ಲಿ ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಸೋಮವಾರ ಮಧ್ಯಾಹ್ನ ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಖಬರಸ್ಥಾನದಲ್ಲಿ ನಡೆಯಿತು.
ಇದಕ್ಕೆ ಮುನ್ನ ಖುದ್ದೂಸ್ ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೃತರಿಗೆ ಸರ್ಕಾರಿ ಗೌರವಗಳನ್ನು ಅರ್ಪಿಸಲಾಯಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ಸಭಾಪತಿ ಬಸವ
ರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂನಬಿ ಆಜಾದ್, ಸಚಿವರಾದ ಯು.ಟಿ.ಖಾದರ್, ಜಮೀರ್ ಅಹಮದ್‌ಖಾನ್, ಶಾಸಕ ಆರ್.ರೋಷನ್ ಬೇಗ್, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಮತ್ತಿತರ ರಾಜಕೀಯ ಮುಖಂಡರು ಇದ್ದರು.
ಬಳಿಕ ಅಲ್ಲಿಂದ ನಂದಿದುರ್ಗ ರಸ್ತೆಯಲ್ಲಿರುವ ಖಬರಸ್ಥಾನಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ಷರೀಫ್ ಅವರ ನೂರಾರು ಅಭಿಮಾನಿಗಳು ಇದ್ದರು. ಇಸ್ಲಾಂ ವಿಧಿವಿಧಾನಗಳ ಪ್ರಕಾರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಧ್ಯಾಹ್ನ 12ರ ವೇಳೆಗೆ ಮೃತರ ಶರೀರವನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತರಲಾಯಿತು. ಸುಮಾರು ಅರ್ಧಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ದೇಶದ ಅಗ್ರಗಣ್ಯ ನಾಯಕ:ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಷರೀಫ್ ರಾಜ್ಯಕ್ಕೆ ಮಾತ್ರವಲ್ಲ, ದೇಶದ ಪ್ರಮುಖ ನಾಯಕರಾಗಿದ್ದರು. ರೈಲ್ವೆ ಸಚಿವರಾಗಿ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, 1978 ರಲ್ಲಿ ಕಾಂಗ್ರೆಸ್ ವೀಕ್ಷಕರಾಗಿದ್ದ ಜಾಫರ್ ಷರೀಫ್ ಅವರು ವಿಧಾನಸಭೆಯಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಿದರು ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.