ಬೆಂಗಳೂರು: ನಟ ಸುದೀಪ್ ಅವರಿಗೆ ಬಂದಿರುವ ಎರಡು ಅನಾಮಧೇಯ ಪತ್ರಗಳ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎರಡೂ ಪತ್ರಗಳು ದೊಮ್ಮಲೂರು ಅಂಚೆ ಕಚೇರಿಯಿಂದ ಬಂದಿರುವ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ.
ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ತಂಡ, ಪತ್ರಗಳನ್ನು ಸುಪರ್ದಿಗೆ ಪಡೆದಿತ್ತು. ಪತ್ರ ತಂದು ಕೊಟ್ಟವರು ಹಾಗೂ ಇತರರನ್ನು ವಿಚಾರಣೆ ನಡೆಸಿತ್ತು. ದೊಮ್ಮಲೂರು ಅಂಚೆ ಕಚೇರಿಯಿಂದ ಪತ್ರ ಬಂದಿರುವುದು ಗೊತ್ತಾಗುತ್ತಿದ್ದಂತೆ, ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದೆ.
‘ಕಾರೊಂದರಲ್ಲಿ ಬಂದಿದ್ದ ಆರೋಪಿಗಳು, ದೊಮ್ಮಲೂರು ಅಂಚೆ ಕಚೇರಿ ಡಬ್ಬಿಯಲ್ಲಿ ಪತ್ರ ಹಾಕಿ ಹೋಗಿ ದ್ದಾರೆ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಮಾಡಲಾಗಿತ್ತು. ಕೆಂಗೇರಿ ನಿವಾಸಿ ಯಾಗಿರುವ ಮಾಲೀಕರನ್ನು ವಿಚಾರಿಸಿ
ದಾಗ, ತಮಗೂ ಪ್ರಕರಣಕ್ಕೂ ಯಾವುದೇಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ, ಅವರು ಅಮಾಯಕರೆಂಬುದು ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ಆರೋಪಿಗಳು ನಕಲಿ ನೋಂದಣಿ ಫಲಕ ಅಳವಡಿಸಿದ್ದ ಕಾರು ಬಳಸಿ, ಅಂಚೆ ಕಚೇರಿಗೆ ಬಂದು ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅವರು ಯಾರು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.