ಬೆಂಗಳೂರು: ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ, ಮೂರು ದಿನದಲ್ಲಿ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೂರೂ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಈಗಾಗಲೇ ಚರ್ಚೆ ಆಗಿದೆ. ಈ ಕ್ಷೇತ್ರಗಳಿಗೆ ಮೂರು ತಂಡಗಳು ಹೋಗಿ ಸ್ಥಳಿಯರ ಅಭಿಪ್ರಾಯ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಶಿಗ್ಗಾವಿಯಲ್ಲಿ ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಛೆ ಇಲ್ಲ. ಪ್ರಸ್ತಾವವನ್ನೂ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದ್ದು, ಆ ಸಭೆಯಲ್ಲಿ ನಾನು ಹಾಜರಿರಲಿಲ್ಲ. ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ’ ಎಂದರು.
‘ಶಿಗ್ಗಾವಿ ನಾನು ಪ್ರತಿನಿಧಿಸುವ ಕ್ಷೇತ್ರ ಆಗಿರುವುದರಿಂದ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ನಾನು ಸ್ಪರ್ಧೆ ಮಾಡಿದಾಗ ಸಿಕ್ಕ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ’ ಎಂದು ಬೊಮ್ಮಾಯಿ ಹೇಳಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಿರಾಣಿ ಸ್ಪರ್ಧೆ ಮಾಡುವ ಬಗ್ಗೆ ಕೇಳಿದ್ದಾರೆ. ಆದರೆ, ಹೊರಗಿನವರು ಬಂದು ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕು. ನಾನು ಸ್ಥಳೀಯ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ್ದೇನೆ. ಸುಮಾರು ಐವತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ’ ಎಂದರು.
ಯೋಗೇಶ್ವರ ಪರ ಮಾತು:
‘ನಾವು ಐದಾರು ಜನ ಬಿಜೆಪಿ ಮುಖಂಡರು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಿ.ಪಿ. ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಅವರಿಗೆ ಕೇಳಿದ್ದೇವೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿಯವರು ಸೇರಿ ತೀರ್ಮಾನ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.