ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣದವರಲ್ಲಿ ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ. ಆದರೆ, ಈ ಮೂವರೂ ಒಂದೇ ಸಮುದಾಯಕ್ಕೆ ಸೇರಿದವರು ಎಂಬ ವಿಚಾರ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್‌ನಿಂದ ಎಚ್.ವಿಶ್ವನಾಥ್, ಕಾಂಗ್ರೆಸ್‌ನಿಂದ ಎಂ.ಟಿ.ಬಿ.ನಾಗರಾಜ್ ಮತ್ತು ಪಕ್ಷೇತರರಾಗಿದ್ದ ಆರ್.ಶಂಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ‘ಮೈತ್ರಿ ಸರ್ಕಾರ’ದ ಪತನಕ್ಕೆ ಕಾರಣರಾದವರಲ್ಲಿ ಪ್ರಮುಖರು. ಇವರು ಪ್ರಭಾವಿ ಕುರುಬ ಸಮಾಜಕ್ಕೆ ಸೇರಿದವರು. ಒಂದೇ ಸಮಾಜಕ್ಕೆ ಸೇರಿದ ಎಲ್ಲರಿಗೂ ಅವಕಾಶ ಕೊಡುವುದು ಎಷ್ಟರ ಮಟ್ಟಿಗೆ ಸರಿ. ಇತರ ಹಿಂದುಳಿದ ವರ್ಗದವರಿಗೂ ಅವಕಾಶ ನೀಡಬೇಕು ಎಂಬ ಕುರಿತು ಕೆಲವು ನಾಯಕರು ಚರ್ಚೆ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮೈತ್ರಿ ಸರ್ಕಾರದ ಪತನಕ್ಕೂ ಮುನ್ನ ಇವರಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನಮಾನದ ಭರವಸೆ ನೀಡಲಾಗಿತ್ತು. ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಅವರು ಪಟ್ಟು ಹಿಡಿದು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಪರಾಭವಗೊಂಡರು. ಈ ಹಿಂದೆ ಮಾತುಕೊಟ್ಟಂತೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಒತ್ತಡವನ್ನು ಅವರು ಮುಂದುವರಿಸಿದ್ದಾರೆ. ಪೂರಕವಾಗಿ ಯಡಿಯೂರಪ್ಪ ಅವರೂ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿಯೂ ವಾಗ್ದಾನ ನೀಡಿದ್ದಾರೆ.
ಇದೊಂದು ವಿಶೇಷ ಸಂದರ್ಭ ಆಗಿರುವುದರಿಂದ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಮೂವರನ್ನೂ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಹೇಳಿವೆ.
ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಮೇಲ್ಮನೆಗೆ ಆಯ್ಕೆಗೆ ಟಿಕೆಟ್ ಗಿಟ್ಟಿಸಲು ಸಾಕಷ್ಟು ಆಕಾಂಕ್ಷಿಗಳೂ ಹುಟ್ಟಿಕೊಂಡಿದ್ದಾರೆ.ವಿಧಾನಪರಿಷತ್ತಿನಲ್ಲಿ ಇದೇ ತಿಂಗಳು ಒಟ್ಟು 16 ಸ್ಥಾನಗಳು ತೆರವಾಗಲಿವೆ. ಅದರಲ್ಲಿ ವಿಧಾನಸಭೆಯಿಂದ ಪರಿಷತ್ತಿಗೆ 7, ಪದವೀಧರ ಕ್ಷೇತ್ರಗಳ 2, ಶಿಕ್ಷಕರ ಕ್ಷೇತ್ರಗಳ 2 ಮತ್ತು ನಾಮನಿರ್ದೇಶನ 5 ಸ್ಥಾನಗಳಿವೆ. ಈ ಪೈಕಿ ವಿಧಾನಸಭೆಯಿಂದ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ 4 ಸ್ಥಾನಗಳು ಬಿಜೆಪಿಗೆ ಅನಾಯಾಸವಾಗಿ ಸಿಗಲಿವೆ. ನಾಮ ನಿರ್ದೇಶನಕ್ಕಿರುವ 5 ಸ್ಥಾನಗಳೂ ಬಿಜೆಪಿ ಸಿಗಲಿದೆ.
ಅಲ್ಲದೇ, ‘ಆಪರೇಷನ್ ಕಮಲ’ದಲ್ಲಿ ಮುಂಚೂಣಿಯಲ್ಲಿದ್ದರು ಎನ್ನಲಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರೂ ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆ ಮೂಲಕ ಸಚಿವ ಸ್ಥಾನ ಗಿಟ್ಟಿಸುವ ಲೆಕ್ಕಾಚಾರ ನಡೆಸಿದ್ದಾರೆ.
ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಅಶ್ವತ್ಥನಾರಾಯಣ, ಭಾನುಪ್ರಕಾಶ್, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ, ಪ್ರೊ.ಮ.ನಾಗರಾಜ್ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಮೂರು ಸ್ಥಾನಗಳು ಹೊರಗಿನಿಂದ ಬಂದವರಿಗೆ ನೀಡಿದರೆ, ಉಳಿದ ಒಂದು ಸ್ಥಾನ ಮೂಲ ನಿವಾಸಿಗಳಿಗೆ ಸಿಗಬಹುದು ಎಂದು ಮೂಲಗಳು ಹೇಳಿವೆ.
ಪರಿಷತ್ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಮೇಲೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಲು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ. ಸಾಕಷ್ಟು ಪೈಪೋಟಿ ಇರುವುದರಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದನ್ನು ರಾಷ್ಟ್ರೀಯ ನಾಯಕರಿಗೆ ಕಳುಹಿಸಲು ಚಿಂತನೆ ನಡೆಸಿದ್ದಾರೆ.
ತೆರವಾಗುತ್ತಿರುವ ಏಳು ಸ್ಥಾನಗಳು
ತೆರವಾಗುತ್ತಿರುವ ಏಳು ಸ್ಥಾನಗಳಲ್ಲಿ ವಿವಿಧ ಸಮುದಾಯಗಳಿಗೆ ಸೇರಿದವರು ಇದ್ದರು, ಜಯಮ್ಮ– ಯಾದವ,ಬೋಸ್‌ರಾಜ್–ಕಮ್ಮ, ಶರವಣ–ವೈಶ್ಯ, ಮಲ್ಲಿಕಾರ್ಜುನ–ಲಿಂಗಾಯಿತ, ನಜೀರ್ ಅಹಮದ್–ಮುಸ್ಲಿಂ, ವೇಣುಗೋಪಾಲ್– ಸವಿತಾ ಸಮಾಜಕ್ಕೆ ಸೇರಿದ್ದರು. ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ಸಿಕ್ಕಿತ್ತು ಎಂದು ವ್ಯಾಖ್ಯಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.