ಬೆಂಗಳೂರು: 'ಮೂರು ಅಪರಾಧ ಕಾನೂನುಗಳು ಇಂದಿನಿಂದ ಜಾರಿಯಾಗಿದೆ. ಇದನ್ನು ಜಾರಿಗೊಳಿಸುವ ಸಂಬಂಧ ನಾವು ಒಂದು ತಂತ್ರಾಂಶ (ಆ್ಯಪ್) ಅಭಿವೃದ್ಧಿಪಡಿಸಿದ್ದೇವೆ. ಇನ್ಮುಂದೆ ದಾಖಲಾಗುವ ಕೇಸ್‌ಗಳಿಗೆ ಈ ಕಾನೂನುಗಳು ಅನ್ವಯ ಆಗಲಿದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ಈ ಕಾನೂನುಗಳ ಪರಿಣಾಮ ಏನು ಎಂದು ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಯಶಸ್ಸಿನ ಬಗ್ಗೆ ಗೊತ್ತಾಗಲಿದೆ' ಎಂದರು.
'ಇವತ್ತಿನಿಂದ ದಾಖಲಾಗುವ ಎಲ್ಲ ಪ್ರಕರಣಗಳು ಹೊಸ ಕಾನೂನುಗಳಡಿ ಬರುತ್ತವೆ. ಹೊಸ ಕಾನೂನುಗಳ ಜಾರಿ ಬಗ್ಗೆ ನಾವು ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಕಾನ್‌ಸ್ಟೆಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಆ್ಯಪ್ ನೋಡಿಕೊಂಡು ಕೆಲಸ ಮಾಡಬಹುದು' ಎಂದರು.
ಈ ಕಾನೂನುಗಳು ಇಡೀ ದೇಶದಲ್ಲಿ ಜಾರಿಯಾಗಿದೆ, ಫೀಡ್ ಬ್ಯಾಕ್ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು ಎಂದೂ ಹೇಳಿದರು.
ಸರ್ಕಾರದ ಭವಿಷ್ಯದ ಬಗ್ಗೆ ಸಿ .ಟಿ. ರವಿ ಮತ್ತು ಬಸವರಾಜ ಬೊಮ್ಮಾಯಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, 'ಅದು ವ್ಯಾಖ್ಯಾನಗಳು. ಅವರವರಲ್ಲೇ ಹೇಳಿಕೆಗಳು ವಿಭಿನ್ನವಾಗಿವೆ. ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ ಟಿ. ರವಿ ಇನ್ನೊಂದು ಹೇಳಿಕೆ ಕೊಡುತ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ ಎಂದರು.
ಅಂತರ್ ಜಿಲ್ಲಾ ವರ್ಗಾವಣೆ ಗೊಂದಲ: ಪರಮೇಶ್ವರ ಅವರನ್ನು ಕುಟುಂಬ ಸಮೇತ ಬಂದು ಭೇಟಿ ಮಾಡಿದ ಕಾನ್‌ಸ್ಟೆಬಲ್‌ಗಳು, ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಗೊಂದಲ ಇರುವುದಾಗಿ ಹೇಳಿಕೊಂಡರು.
ಈ ವೇಳೆ ಮಾತನಾಡಿದ ಪರಮೇಶ್ವರ, 'ಇದಕ್ಕಾಗಿ ನಿಯಮಗಳನ್ನು ರಚಿಸಲಾಗುತ್ತದೆ. ಉತ್ತರ ಕರ್ನಾಟಕ ಕಡೆಯವರು ಇಲ್ಲಿಗೆ ಬಂದು ಕೆಲಸ ಮಾಡುವಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಒಂದಷ್ಟು ನಿಯಮಗಳನ್ನು ಮಾಡಲಾಗುತ್ತಿದೆ' ಎಂದರು.
'ಪತಿ-ಪತ್ನಿ ವರ್ಗಾವಣೆ ವಿಚಾರಕ್ಕೂ ಹೊಸ ನಿಯಮಗಳನ್ನು ಮಾಡಲಾಗುವುದು. ಆದಷ್ಟು ಶೀಘ್ರವಾಗಿ ನಿಯಮಗಳನ್ನು ಮಾಡುತ್ತೇವೆ' ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.