ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ‘ಅಪ್ಪ, ಅಮ್ಮ ಇದ್ದಾಗ ಸಿರಿತನವಿತ್ತು..’

ದಂಪತಿ ಸಾವು lಮೂವರು ಹೆಣ್ಣು ಮಕ್ಕಳು ಅನಾಥ, ಅಜ್ಜಿ ಮನೆಯಲ್ಲಿ ಆಶ್ರಯ

ಎಂ.ರಾಮಕೃಷ್ಣಪ್ಪ
Published 17 ಜೂನ್ 2021, 19:35 IST
Last Updated 17 ಜೂನ್ 2021, 19:35 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ಚಿಂತಾಮಣಿ: ‘ಅಪ್ಪ ಅಮ್ಮ ಕೂಲಿ ಮಾಡಿದರೂ ಅವರು ಇದ್ದಾಗ ಬದುಕಿನಲ್ಲಿ ಸಿರಿತನವಿತ್ತು. ನೆಮ್ಮದಿಯ ಜೀವನ ನಡೆಸುತ್ತಿದ್ದೆವು’ ಎಂದು ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರದ ವಿದ್ಯಾರ್ಥಿನಿ, 16 ವರ್ಷದ ಮಂಗಳಾ ಭಾವುಕರಾದರು.

ವೆಂಕಟಾಪುರದ ಶ್ರೀರಾಮಪ್ಪ ಹಾಗೂ ವಿಜಯಮ್ಮ ದಂಪತಿಗೆ ಮೂವರು ಮಕ್ಕಳು. ಮಂಗಳಾ ಹಿರಿಯ ಮಗಳು. ಭಾಗ್ಯಲಕ್ಷ್ಮಿ ಮತ್ತು ಲಲಿತಾ ಕಿರಿಯ ಮಕ್ಕಳು. ಶ್ರೀರಾಮಪ್ಪ ಮತ್ತು ವಿಜಯಮ್ಮ ಕೋವಿಡ್ ಸೋಂಕಿನಿಂದ ಎರಡೇ ವಾರದ ಅಂತರದಲ್ಲಿ ಮೃತಪಟ್ಟರು. ಈಗ ಈ ಮೂವರು ಹೆಣ್ಣು ಮಕ್ಕಳು ಅಜ್ಜಿಮನೆ (ತಾಯಿಯ ತವರು) ಶಿಡ್ಲಘಟ್ಟ ತಾಲ್ಲೂಕಿನ ಪಿಲ್ಲಗುಂಡ್ಲಹಳ್ಳಿಯಲ್ಲಿ ಸೋದರ ಮಾವನ ಆಶ್ರಯದಲ್ಲಿ ಇದ್ದಾರೆ.

ಮಂಗಳಾ ಚಿಂತಾಮಣಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ. ಭಾಗ್ಯಲಕ್ಷ್ಮಿ 9ನೇ ಹಾಗೂ ಲಲಿತಾ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.

ADVERTISEMENT

ಬಡತನವಿದ್ದರೂ ಅಪ್ಪ, ಅಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು. ಮೂವರನ್ನು ಓದಿಸುತ್ತಿದ್ದರು. ಏಪ್ರಿಲ್‌ನಲ್ಲಿ ಎರಡನೇ ವಾರದಲ್ಲಿ ತಂದೆಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತು. ಒಂದೆರಡು ದಿನ ಮಾತ್ರೆ ನುಂಗಿ ಮಲಗಿದ್ದರು. ಕಡಿಮೆ ಆಗಲಿಲ್ಲ, ಕೊರೊನಾ ಪರೀಕ್ಷೆ ಮಾಡಿಸಿದರು. ಪಾಸಿಟಿವ್ ವರದಿ ಬಂದಿತ್ತು. ಕಷ್ಟದಲ್ಲೇ ಸಾಕಷ್ಟು ಖಾಸಗಿ ಆಸ್ಪತ್ರೆ
ಗಳಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಆದರೂ
ಪ್ರಯೋಜನವಾಗಲಿಲ್ಲ. ಅಮ್ಮ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದರು. ಅಪ್ಪ ತೀರಿದ ಎರಡನೇ ವಾರದಲ್ಲಿ
ಕೊರೊನಾ ತಾಯಿಗೆ ತಗುಲಿತು. ಕ್ರೂರ ಕೊರೊನಾ ಅಮ್ಮನ ಮೇಲೂ ಕರುಣೆ ತೋರಲಿಲ್ಲ. ಅಮ್ಮ ಕೂಡ ಅಪ್ಪನ ಹಾದಿ ಹಿಡಿದರು.

‘ನಾವು ತಂದೆ ತಾಯಿ ಪ್ರೀತಿ, ಮಮತೆಯಿಂದ ವಂಚಿತರಾಗಿದ್ದೇವೆ. ನಾನು ಚೆನ್ನಾಗಿ ವ್ಯಾಸಂಗ ಮಾಡಿ ಉದ್ಯೋಗ ಪಡೆಯಬೇಕು. ನನ್ನ ತಂಗಿಯರನ್ನು ಚೆನ್ನಾಗಿ ಓದಿಸಬೇಕು ಎನ್ನುವ ಆಸೆ ಇದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರದ ಸಹಾಯ ಅಗತ್ಯ’ ಎಂದು ಮಂಗಳಾ ಮನದ ಇಂಗಿತ ವ್ಯಕ್ತಪಡಿಸಿದರು.

ಮಕ್ಕಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಎಲ್ಲ ಕಾನೂನು
ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅಜ್ಜಿಯ ಮನೆಗೆ ಕಳುಹಿಸಲಾಗಿದೆ. ಮಕ್ಕಳಿಗೆ ಅವರ ಆಶ್ರಯ ಸೂಕ್ತ ಎಂದು ಮನವರಿಕೆಯಾದ ನಂತರವೇ ಕಳುಹಿಸಿದ್ದೇವೆ. ಕಾನೂನಿನ ಪ್ರಕಾರ ‌ದೊರೆಯುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಗಳು ನೇರವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.