ADVERTISEMENT

ಗುತ್ತಿಗೆದಾರರಿಗೆ ಮೂರು ತಿಂಗಳ ಬಿಲ್‌ ಪಾವತಿ: ಸರ್ಕಾರದಿಂದ ₹750 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:22 IST
Last Updated 9 ಅಕ್ಟೋಬರ್ 2024, 15:22 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2023ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಬಿಲ್‌ಗಳನ್ನು ಪಾವತಿಸಲು ₹154.10 ಕೋಟಿ ಬಿಡುಗಡೆ ಮಾಡಲಾಗಿದೆ.

ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಈ ಮೂರು ತಿಂಗಳ ಬಿಲ್‌ಗಳಲ್ಲಿ ಶೇ 75ರಷ್ಟನ್ನು ಪಾವತಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ವಲಯದ ಎಲ್ಲ ಮುಖ್ಯ ಎಂಜಿನಿಯರ್‌ಗಳಿಗೆ ಅಗತ್ಯ ಮೊತ್ತವನ್ನು ಮುಖ್ಯ ಲೆಕ್ಕಾಧಿಕಾರಿಯವರು ಅಕ್ಟೋಬರ್‌ 9ರಂದು ಬಿಡುಗಡೆ ಮಾಡಿದ್ದಾರೆ.

ADVERTISEMENT

ಸಾಮಾನ್ಯ ಜೇಷ್ಠತೆ ಆಧಾರದಲ್ಲಿ ಬಿಲ್‌ಗಳನ್ನು ಪಾವತಿ ಮಾಡಲು ಸೂಚಿಸಲಾಗಿದೆ.

₹ 750 ಕೋಟಿ: ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. ₹750 ಕೋಟಿ ಅನುದಾನ ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಇ–ಪೇಮೆಂಟ್‌ ಮೂಲಕ ಹಣ ವರ್ಗಾಯಿಸಲು ಸಮ್ಮತಿ ನೀಡಿದೆ. 

ನಗರೋತ್ಥಾನ ಯೋಜನೆಯಡಿ ಸರ್ಕಾರದ ಅನುದಾನದಡಿ ನಿರ್ವಹಿಸಲಾಗಿರುವ ಕಾಮಗಾರಿಗಳ ₹2,200 ಕೋಟಿ ಬಿಲ್‌ ಬಾಕಿ ಇದ್ದು, ಈ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸದಿದ್ದರೆ ಕಾಮಗಾರಿಗಳು ಸ್ಥಗಿತಗೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿಯಾಗಿರುವ ₹3 ಸಾವಿರ ಕೋಟಿ ಅನುದಾನದಲ್ಲಿ, ₹750 ಕೋಟಿಯನ್ನು ಮೊದಲನೆ ಕಂತಾಗಿ ಜುಲೈ 11ರಂದು ಬಿಡುಗಡೆ ಮಾಡಲಾಗಿತ್ತು. ಅ.8ರಂದು ಎರಡನೇ ಕಂತನ್ನು ಬಿಡುಗಡೆ ಮಾಡಲಾಗಿದೆ.

ಒತ್ತಾಯ: ‘ದಸರಾ ಹಬ್ಬವಿರುವುದರಿಂದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಒತ್ತಾಯದ ಮೇರೆಗೆ ಮೂರು ತಿಂಗಳ ಬಿಲ್‌ ಪಾವತಿಗೆ ಹಣ ಬಿಡುಗಡೆ ಮಾಡಲಾಗಿದೆ. ಗುರುವಾರದೊಳಗೆ ಎಲ್ಲ ಮೊತ್ತವನ್ನು ಗುತ್ತಿಗೆದಾರರ ಖಾತೆಗೆ ವರ್ಗಾಯಿಸಬೇಕು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ಒತ್ತಾಯಿಸಿದರು.

‘ಬಾಕಿ ಬಿಲ್‌ ಮೊತ್ತದ ಶೇ 25ರಷ್ಟನ್ನು ಪಾವತಿಸಬೇಕು ಎಂದು ಕಾಮಗಾರಿ ಸ್ಥಗಿತಗೊಳಿಸಿ ಗುತ್ತಿಗೆದಾರರು ಪ್ರತಿಭಟಿಸಿದ್ದರು. 10 ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದರು. ಇನ್ನೂ ಆಗಿಲ್ಲ. ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಮತ್ತೆ  ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.