ADVERTISEMENT

ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

*ವಾರದಲ್ಲಿ ನಿರ್ಧಾರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗವು ತನ್ನ ಮೊದಲ ಸಲಹಾ ವರದಿಯನ್ನು ಸರ್ಕಾರಕ್ಕೆ ನೀಡಿದ್ದು, ರಾಜ್ಯದ ಪದವಿ ಕಾಲೇಜುಗಳಲ್ಲಿ ಹಿಂದೆ ಇದ್ದಂತೆ ಮೂರು ವರ್ಷಗಳ ಪದವಿಯನ್ನೇ ಮುಂದುವರಿಸುವಂತೆ ಶಿಫಾರಸು ಮಾಡಿದೆ.

ಬಿಜೆಪಿ ಸರ್ಕಾರವು ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಗೊಳಿಸಿದೆ ಎಂದು ಚುನಾವಣಾ ಪೂರ್ವದಲ್ಲಿ ಆಪಾದಿಸಿದ್ದ ಕಾಂಗ್ರೆಸ್‌, ಪಕ್ಷ ಅಧಿಕಾರಕ್ಕೆ ಬಂದರೆ ಎನ್‌ಇಪಿ ರದ್ದು ಮಾಡುವುದಾಗಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಇಪಿ ಆಯೋಗವನ್ನು ರಚಿಸಿತ್ತು. ಹಲವು ಸುತ್ತಿನ ಸಭೆ, ಅಧ್ಯಯನ, ಸಮಾಲೋಚನೆಗಳನ್ನು ನಡೆಸಿದ್ದ ಸುಖದೇವ್ ಥೋರಟ್ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಇತ್ತೀಚೆಗೆ ವರದಿ ಸಲ್ಲಿಸಿದೆ.

‘2021–22ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ 6ನೇ ಸೆಮಿಸ್ಟರ್‌ ಇದೇ ಜೂನ್‌ ಒಳಗೆ ಪೂರ್ಣಗೊಳ್ಳಲಿದೆ. ಅವರನ್ನು ನಾಲ್ಕನೇ ವರ್ಷದ ಪದವಿಗೆ ಮುಂದುವರಿಸಬೇಕೇ? ಬೇಡವೇ ಎನ್ನುವುದು ತುರ್ತು ತೆಗೆದುಕೊಳ್ಳಬೇಕಾದ ನಿರ್ಧಾರ. ಹಾಗಾಗಿ, ಮೂರನೇ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳ ‘ಆನರ್ಸ್‌’ ಕನಸು ಆಯೋಗದ ವರದಿ ಆಧಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ರಾಜ್ಯದ ಉನ್ನತ ಶಿಕ್ಷಣದಲ್ಲಿ 2021–22ನೇ ಸಾಲಿನಿಂದಲೇ ಜಾರಿಗೊಳಿಸಲಾಗಿತ್ತು. ಪಿಯು ನಂತರ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಪದವಿ ವ್ಯಾಸಂಗ ಮಾಡಬಹುದಿತ್ತು. ಅಲ್ಲದೇ, ಪ್ರತಿವರ್ಷ ಪಡೆಯುವ ಪದವಿಗೆ ಪ್ರತ್ಯೇಕ ಪ್ರಮಾಣಪತ್ರ ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಒಂದು ವರ್ಷ ಓದಿದವರಿಗೆ ‘ಸರ್ಟಿಫಿಕೇಟ್‌ ಕೋರ್ಸ್‌’, ಎರಡು ವರ್ಷ ಪೂರೈಸಿದರೆ ‘ಡಿಪ್ಲೊಮಾ’, ಮೂರು ವರ್ಷಕ್ಕೆ ‘ಪದವಿ’, ನಾಲ್ಕು ವರ್ಷಕ್ಕೆ ‘ಆನರ್ಸ್‌‘ ನೀಡುವ ನಿಯಮ ಜಾರಿಗೊಳಿಸಲಾಗಿತ್ತು. ಇದರಿಂದ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಮಧ್ಯದಲ್ಲೇ ಪದವಿ ತೊರೆಯುವ, ಇಚ್ಛಿಸಿದರೆ ಮತ್ತೆ ಮರು ಸೇರ್ಪಡೆಗೊಳ್ಳಲು ಅವಕಾಶವಿತ್ತು.

ಎನ್‌ಇಪಿಯ ಇಂತಹ ನಿಯಮಗಳಿಗೆ ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಎನ್‌ಇಪಿಯ ನೀತಿ ಪರಿಶೀಲಿಸಿ, ಹೊಸದಾಗಿ ಶಿಕ್ಷಣ ನೀತಿ ರೂಪಿಸಲು ಥೋರಟ್‌ ಅಧ್ಯಕ್ಷತೆಯಲ್ಲಿ 11 ಸದಸ್ಯರು ಹಾಗೂ ಸಲಹೆ ನೀಡಲು ಎಂಟು ತಜ್ಞರನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಲಾಗಿತ್ತು.  

ಆಯೋಗ ರಚಿಸಿದ್ದ 9 ಉಪ ಸಮಿತಿಗಳು ನಾಲ್ಕು ವಿಭಾಗಗಳಲ್ಲಿ ಅಧ್ಯಯನ ನಡೆಸಿದ್ದು, ಆಯ್ದ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಂದ ಲಿಖಿತ ಪ್ರಶ್ನೆಗಳ ಮೂಲಕ ಎನ್‌ಇಪಿಯಲ್ಲಿನ ಹಲವು ಅಂಶಗಳ ಕುರಿತು ಅಭಿಪ್ರಾಯ ಸಂಗ್ರಹಿಸಿತ್ತು. ಅದರಲ್ಲಿ ನಾಲ್ಕು ವರ್ಷಗಳ ಪದವಿ ಹಾಗೂ ಬಹು ಪ್ರವೇಶ–ನಿರ್ಗಮನದ ವಿಷಯಗಳಿಗೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದರು. ಅಭಿಪ್ರಾಯಗಳನ್ನೇ ವರದಿಯಲ್ಲಿ ಆಯೋಗ ಪ್ರಮುಖವಾಗಿ ಉಲ್ಲೇಖಿಸಿದ್ದು, ಎರಡನ್ನೂ ರದ್ದುಗೊಳಿಸುವ ಕುರಿತು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. 

ಆಯೋಗದ ಅವಧಿ ವಿಸ್ತರಣೆ?

ರಾಜ್ಯ ಶಿಕ್ಷಣ ನೀತಿ ರೂಪಿಸಲು ರಚಿಸಲಾದ ಆಯೋಗಕ್ಕೆ ಇದೇ ವರ್ಷದ ಫೆ.28ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅವಧಿಯನ್ನು ಮತ್ತೆ ವಿಸ್ತರಿಸಲು ಆಯೋಗ ಕೋರಿಕೆ ಸಲ್ಲಿಸಿದ್ದು ಮಾರ್ಚ್‌ ಅಂತ್ಯದವರೆಗೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ‘ಆಯೋಗ ಸಲಹೆ ರೂಪದಲ್ಲಿ ಕೆಲವು ಶಿಫಾರಸುಗಳನ್ನು ಮಾಡಿದೆ. 2024–25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ನೀತಿಯನ್ನು ತುರ್ತಾಗಿ ರೂಪಿಸಬೇಕಿದೆ. ಹಾಗಾಗಿ ಮಧ್ಯಂತರ ವರದಿ ಸಲ್ಲಿಸಲು ಸ್ವಲ್ಪ ಸಮಯ ನೀಡಲಾಗುವುದು. ಬೇರೆ ರಾಜ್ಯಗಳಲ್ಲಿ ಎನ್‌ಇಪಿ ಜಾರಿಗೆ ನಡೆಸಿದ್ದ ಸಿದ್ಧತೆ ಅದರ ಸಾಧಕ–ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ ನಂತರ ಸಮಗ್ರ ವರದಿ ನೀಡಲು ಹೆಚ್ಚಿನ ಕಾಲಾವಕಾಶ ಒದಗಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದರು.

‘ನಾಲ್ಕು ವರ್ಷಗಳ ಪದವಿ ಅನಗತ್ಯ’

ಯೂರೋಪ್‌ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮೂರು ವರ್ಷಗಳ ಪದವಿಗೆ ಆದ್ಯತೆ ನೀಡಲಾಗಿದೆ. ಅಮೆರಿಕ ಕೆನಡಾ ಆಸ್ಟ್ರೇಲಿಯಾ ಸೇರಿದಂತೆ ಕೆಲ ದೇಶಗಳು ಮಾತ್ರ ನಾಲ್ಕು ವರ್ಷದ ಪದವಿಯನ್ನು ಪ್ರೋತ್ಸಾಹಿಸುತ್ತಿವೆ. ಭಾರತದಂತಹ ದೇಶಗಳ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಪದವಿ ಸೂಕ್ತವಾಗಿದೆ ಎನ್ನುವುದು ಬಹುತೇಕ ಶಿಕ್ಷಣ ತಜ್ಞರ ಅಭಿಪ್ರಾಯ. ಹಾಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸುಧಾಕರ್‌ ಹೇಳಿದರು. 

ಆಯೋಗ ನೀಡಿದ ಸಲಹೆ ರೂಪದ ವರದಿಯನ್ನು ಸ್ವೀಕರಿಸಿದ್ದು ಶಿಫಾರಸಿನ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ವಾರದೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು
–ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.