ADVERTISEMENT

ಡಿಸೆಂಬರ್‌ನಲ್ಲಿ ‘ಟೈ ಜಾಗತಿಕ ಶೃಂಗಸಭೆ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:06 IST
Last Updated 8 ಆಗಸ್ಟ್ 2024, 16:06 IST
ಸಚಿವರಾದ ಎಂ.ಬಿ. ಪಾಟೀಲ ಮತ್ತು ಪ್ರಿಯಾಂಕ್‌ ಖರ್ಗೆ ಅವರು, ‘ಟೈ ಜಾಗತಿಕ ಶೃಂಗಸಭೆ–2024’ರ ಲಾಂಛನವನ್ನು ಅನಾವರಣ ಮಾಡಿದರು. ಟೈ ಬೆಂಗಳೂರು ಅಧ್ಯಕ್ಷ ಮದನ್ ಪದಕೆ ಇದ್ದರು
ಸಚಿವರಾದ ಎಂ.ಬಿ. ಪಾಟೀಲ ಮತ್ತು ಪ್ರಿಯಾಂಕ್‌ ಖರ್ಗೆ ಅವರು, ‘ಟೈ ಜಾಗತಿಕ ಶೃಂಗಸಭೆ–2024’ರ ಲಾಂಛನವನ್ನು ಅನಾವರಣ ಮಾಡಿದರು. ಟೈ ಬೆಂಗಳೂರು ಅಧ್ಯಕ್ಷ ಮದನ್ ಪದಕೆ ಇದ್ದರು   

ಬೆಂಗಳೂರು: ಇದೇ ವರ್ಷದ ಡಿಸೆಂಬರ್‌ 9–12ರ ವರೆಗೆ ನಡೆಯಲಿರುವ ‘ಟೈ ಜಾಗತಿಕ ಶೃಂಗಸಭೆ–2024 (ಟಿಜಿಎಸ್‌–24)’ರಲ್ಲಿ 750ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿಯಾಗಲಿದ್ದಾರೆ. ಭಾಗಿಯಾಗುವ ನವೋದ್ಯಮಗಳಿಗೆ ಹೂಡಿಕೆಯ ವಿಪುಲ ಅವಕಾಶ ಇರಲಿದೆ ಎಂದು ಟೈ–ಬೆಂಗಳೂರು ಅಧ್ಯಕ್ಷ ಮದನ್‌ ಪದಕೆ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಟಿಜಿಎಸ್‌–24 ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶೃಂಗಸಭೆಯ ಲಾಂಛನ ಅನಾವರಣ ಮಾಡಿದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ‘ಭಾರತದಲ್ಲಿ ಇಂತಹ ಶೃಂಗಸಭೆ ನಡೆಸುವುದಾದರೆ, ಅದಕ್ಕೆ ಕರ್ನಾಟಕ ಮಾತ್ರವೇ ಅತ್ಯುತ್ತಮ ಮತ್ತು ಏಕೈಕ ಆಯ್ಕೆ’ ಎಂದರು.

ADVERTISEMENT

‘ಉದ್ಯಮಗಳು ರಾಜ್ಯವನ್ನು ಬಿಟ್ಟು ಹೋಗುತ್ತಿವೆ. ತೆಲಂಗಾಣವು ರಾಜ್ಯದ ಉದ್ಯಮಗಳನ್ನು ಸೆಳೆಯುತ್ತಿದೆ ಎಂದು ಪದೇ ಪದೇ ಹೇಳಲಾಗುತ್ತಿದೆ. ಆದರೆ, ಇದರಲ್ಲಿ ಹುರುಳಿಲ್ಲ. ರಾಜ್ಯವು ಆರ್ಥಿಕ ವರ್ಷವೊಂದರಲ್ಲಿ ₹4.5 ಲಕ್ಷ ಕೋಟಿಯಷ್ಟು ಐಟಿ ಸೇವೆಯನ್ನು ರಪ್ತು ಮಾಡುತ್ತಿದ್ದು, ವಾರ್ಷಿಕ ಶೇ 29ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ತೆಲಂಗಾಣದ ಐ.ಟಿ ರಫ್ತು ಮೊತ್ತ ₹2.2 ಲಕ್ಷ ಕೋಟಿ. ಅವರು ನಮ್ಮನ್ನು ಹಿಂದಿಕ್ಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

  • ಡಿಸೆಂಬರ್ 9–11: ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶೃಂಗಸಭೆ

  • ಡಿ 12ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ. ಬೆಂಗಳೂರಿನಿಂದ ಮೈಸೂರಿಗೆ ಬಸ್‌ ಯಾತ್ರೆ

  • 50 ದೇಶಗಳ 25,000 ಉದ್ಯಮಿಗಳು, 5,000 ನವೋದ್ಯಮಗಳು ಭಾಗಿಯಾಗುವ ನಿರೀಕ್ಷೆ

ಬೆಂಗಳೂರಿನಲ್ಲಿ ‘ನವೋದ್ಯಮ ಪಾರ್ಕ್‌’ ಆರಂಭಿಸಲಾಗುತ್ತದೆ. ಕೈಗೆಟಕುವ ದರದಲ್ಲಿ ಭೂಮಿ ಕಚೇರಿ ಸಕಲ ಸವಲತ್ತು ನೀಡಲಾಗುತ್ತದೆ.
-ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ
ಜಾಗತಿಕ ಉದ್ಯಮ ಶೃಂಗಸಭೆಗಳಲ್ಲಿ ಭಾರತೀಯ ಮಾದರಿಯನ್ನು ರೂಪಿಸಬೇಕಿದೆ. ಆ ಕೆಲಸವನ್ನು ಕರ್ನಾಟಕದಿಂದಲೇ ಆರಂಭಿಸಲಾಗಿದೆ.
- ಶರತ್ ಬಚ್ಚೇಗೌಡ, ಅಧ್ಯಕ್ಷ ಕಿಯೋನಿಸ್ಕ್‌

ನವೋದ್ಯಮ ಸ್ಪರ್ಧೆ: ₹2.5 ಕೋಟಿ ಬಹುಮಾನ

‘ಜಾಗತಿಕ ನವೋದ್ಯಮ ಸವಾಲು–ವೆಂಚುರೈಸ್‌’ನ 2ನೇ ಆವೃತ್ತಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪಾಟೀಲ ‘ವೆಂಚುರೈಸ್‌–24ಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ವಿಶ್ವದಾದ್ಯಂತ 1000ಕ್ಕೂ ಹೆಚ್ಚು ನವೋದ್ಯಮಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಮೂರು ಸುತ್ತುಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಮುಂಚೂಣಿಗೆ ಬರುವ ನವೋದ್ಯಮಗಳಿಗೆ ₹2.50 ಕೋಟಿ ಮೊತ್ತದ ಬಹುಮಾನ ನೀಡಲಾಗುವುದು’ ಎಂದರು.

‘ರಾಜ್ಯದಲ್ಲಿ ದಶಕಗಳ ಹಿಂದೆಯೇ ಎಚ್‌ಎಂಟಿ ಆರಂಭವಾಗಿತ್ತು. ರಾಜ್ಯವನ್ನು ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ಅವಕಾಶವನ್ನು ನಾವು ಕೈಚೆಲ್ಲಿದೆವು. ಆದರೆ ಈಗ ಮತ್ತೆ ಅಂತಹ ಅವಕಾಶ ಬಂದೊದಗಿದೆ. ರಾಜ್ಯವನ್ನು ಕೈಗಾರಿಕಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.