ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗಿದ್ದು, ಒಂದು ಮುಕ್ಕಾಲು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸದ ಅರಣ್ಯ ಇಲಾಖೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) 2023ರ ಮಾರ್ಚ್ ತಿಂಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು.
‘ನಾನಾಕೇಸರೊಡ್ಲಾ ಗ್ರಾಮದ ಬಳಿ ಗಂಡು ಹುಲಿ ಕಳೇಬರವು 2022ರ ಡಿಸೆಂಬರ್ 18ರಂದು ಪತ್ತೆಯಾಗಿತ್ತು. ಅದರ ತಲೆ ಹಾಗೂ ನಾಲ್ಕು ಕಾಲುಗಳನ್ನು ಕತ್ತರಿಸಿ ಅಪರಿಚಿತರು ಕೊಂಡೊಯ್ದಿದ್ದರು. ಹುಲಿ ಸಾವಿನ ಕುರಿತು ಹಳಿಯಾಳ ಡಿಸಿಎಫ್ ಅವರು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹುಲಿ ಅಥವಾ ಇತರ ಪ್ರಾಣಿಗಳ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆದರೆ, ಹುಲಿಯ ತಲೆ ಹಾಗೂ ಕಾಲುಗಳನ್ನು ಕತ್ತರಿಸಿದವರ ಬಗ್ಗೆ ಉಲ್ಲೇಖಿಸಿಲ್ಲ. ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿರುವ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಹಳಿಯಾಳ ವಿಭಾಗದ ಅರಣ್ಯ ಅಧಿಕಾರಿಗಳು ಅಪೂರ್ಣ ತನಿಖೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ಮರು ತನಿಖೆ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಸೂಚಿಸಿತ್ತು. ಈ ಪ್ರಕರಣದ ಕುರಿತು ಕೈಗೊಂಡ ಕ್ರಮಗಳ ಕುರಿತು ಅಂತಿಮ ವರದಿ ನೀಡುವಂತೆ 2023ರ ಜೂನ್‌ನಲ್ಲಿ ಸೂಚಿಸಿತ್ತು.
ಈ ಪ್ರಕರಣದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಲಾಗಿತ್ತು. 27 ಪುಟಗಳ ಮಾಹಿತಿಯನ್ನು ಸಚಿವಾಲಯ ನೀಡಿದೆ. ಆದರೆ, ಆರೋಪಿಗಳ ಪತ್ತೆಗೆ ಕೈಗೊಂಡ ಕ್ರಮ, ಅಂತಿಮ ವರದಿಗಳ ಬಗ್ಗೆ ಪ್ರಸ್ತಾಪ ಇಲ್ಲ. ‘ಈ ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ತನಿಖೆ ಆಮೆಗತಿಯಿಂದ ಸಾಗಿದೆ’ ಎಂದು ವನ್ಯಜೀವಿ ಹೋರಾಟಗಾರರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.