ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಶಾಸಕರ ಆಸನದಲ್ಲಿ ಕುಳಿತ ಕಾರಣಕ್ಕಾಗಿ ಪೊಲೀಸರ ವಶದಲ್ಲಿರುವ ತಿಪ್ಪೇರುದ್ರಪ್ಪ (76) ಚಿತ್ರದುರ್ಗ ನ್ಯಾಯಾಲಯದಲ್ಲಿ ವಕೀಲರಾಗಿದ್ದರು.
ಮೂಲತಃ ಕೆಳಗೋಟೆಯ ಇವರು ಜೆಸಿಆರ್ ಬಡಾವಣೆಯಲ್ಲಿ ನೆಲೆಸಿದ್ದಾರೆ. ಪತ್ನಿ ನಿವೃತ್ತ ಶಿಕ್ಷಕಿಯಾಗಿದ್ದು, ಪುತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ನ್ಯಾಯಾಲಯದಲ್ಲಿ ಶೀಘ್ರಲಿಪಿಕಾರರಾಗಿ ಕೆಲಸ ಮಾಡುತ್ತಿದ್ದ ತಿಪ್ಪೇರುದ್ರಪ್ಪ, ಎರಡು ದಶಕಗಳ ಹಿಂದೆಯೇ ಸ್ವಯಂ ನಿವೃತ್ತಿ ಪಡೆದಿದ್ದರು. ಕಾನೂನು ಪದವಿ ಪಡೆದು ವಕೀಲರಾಗಿದ್ದರು. ವಯಸ್ಸಿನ ಕಾರಣಕ್ಕೆ ಇತ್ತೀಚೆಗೆ ಅವರ ಬಳಿ ಹೆಚ್ಚು ಪ್ರಕರಣಗಳು ಬರುತ್ತಿರಲಿಲ್ಲ. ನಿತ್ಯವೂ ನ್ಯಾಯಾಲಯಕ್ಕೆ ಹಾಜರಾಗಿ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
‘ತಿಪ್ಪೇರುದ್ರಪ್ಪ ವಕೀಲರ ಸಂಘದ ಹಿರಿಯ ಸದಸ್ಯ. ಉತ್ತಮ ಮನುಷ್ಯರಾಗಿದ್ದ ಅವರು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಬಜೆಟ್ ಕಲಾಪ ವೀಕ್ಷಿಸಲು ಪಾಸ್ ಪಡೆದು ವಿಧಾನಸೌಧ ಪ್ರವೇಶಿಸಿದ್ದರು. ವೀಕ್ಷಕರ ಗ್ಯಾಲರಿಗೆ ತೆರಳುವ ಮಾರ್ಗ ತಿಳಿಯದೇ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಯಲಿ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕಾರ್ಯವನ್ನು ಮಾಡಬಾರದು’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಶಿವು ಯಾದವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.