ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಪಟ್ಟಣದಲ್ಲಿ ಮೂರು ಅರಮನೆಗಳಿದ್ದವು ಎಂಬ ಸುಳಿವಿನ ಬೆನ್ನತ್ತಿರುವ ಸಂಶೋಧಕ ಅರೇನಹಳ್ಳಿ ಧರ್ಮೇಂದ್ರಕುಮಾರ್, ಮೂರನೇ ಅರಮನೆ ಅವಶೇಷಕ್ಕಾಗಿ ಶೋಧ ಆರಂಭಿಸಿದ್ದಾರೆ.
ಇಂಗ್ಲಿಷ್ ಲೇಖಕ ಫ್ರಾನ್ಸಿಸ್ ಅನೆಸ್ಲಿ ಅವರು ಉಲ್ಲೇಖಿಸಿರುವ ದಾಖಲೆ ಆಧರಿಸಿ ಪಟ್ಟಣದಲ್ಲಿ ಶೋಧ ನಡೆಸುತ್ತಿದ್ದಾರೆ. ಗ್ಯಾರಿಸನ್ ಆಸ್ಪತ್ರೆ (ಬ್ರಿಟಿಷ್ ಸೈನಿಕರಿಗಾಗಿ ತೆರೆದಿದ್ದ ಆಸ್ಪತ್ರೆ) ಸ್ಮಾರಕ ಇರುವ ಸ್ಥಳದಲ್ಲಿ ಈ ಹಿಂದೆ ಅರಮನೆ ಇತ್ತು ಎಂದು ಹೇಳಲಾಗುತ್ತಿದೆ.
ಈ ವಾದಕ್ಕೆಪುಷ್ಟಿ ನೀಡುವಂತೆ ಆಸ್ಪತ್ರೆ ಇದ್ದ ಜಾಗದಲ್ಲಿ ವಿಶಾಲ ಸಭಾಂಗಣದ ತಳಪಾಯದ ಅವಶೇಷದ ಜತೆಗೆ ಕೊಠಡಿಗಳ ಕುರುಹು ಗೋಚರಿಸುತ್ತಿವೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ನೀರಿನ ಎರಡು ಬಾವಿಗಳು ಇರುವ ಲಕ್ಷಣಗಳು ಇವೆ.
‘ಟಿಪ್ಪು ಅವಧಿಯಲ್ಲಿ ಲಾಲ್ ಮಹಲ್ ಮತ್ತು ಬೇಸಿಗೆ ಅರಮನೆ ಜತೆಗೆ ಮತ್ತೊಂದು ಅರಮನೆಯೂ ಇತ್ತು. ಅದರ ಕುರುಹುಗಳು ಸ್ಪಷ್ಟವಾಗಿಲ್ಲ. ಕನ್ನಡದಲ್ಲಿ ದಾಖಲೆಗಳು ಇವೆ. ಇಂಗ್ಲಿಷ್ ಇತಿಹಾಸಕಾರರ ಮಾಹಿತಿ ಆಧರಿಸಿಹುಡುಕಾಟ ನಡೆಸಿದ್ದೇನೆ’ ಎಂದು ಧರ್ಮೇಂದ್ರಕುಮಾರ್ ತಿಳಿಸಿದರು.
‘ಒಬೆಲಿಸ್ಕ್ ಸ್ಮಾರಕದ ಬಳಿ ಇರುವ ಶಸ್ತ್ರಾಗಾರದ (ಮದ್ದಿನ ಮನೆ) ಅನತಿ ದೂರದಲ್ಲಿ ಅರಮನೆ ಇತ್ತು ಎನ್ನಲಾಗಿದೆ. ಪ್ರಾಚ್ಯವಸ್ತು ಇಲಾಖೆಯ ದಾಖಲೆಯನ್ನು ಸಂಗ್ರಹಿಸಿ ಇತಿಹಾಸ ತಿಳಿಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.