ಬಾದಾಮಿ: ’ಕನಕದಾಸ, ಸಾಮ್ರಾಟ್ ಅಶೋಕನ ರೀತಿ ಟಿಪ್ಪು ಸುಲ್ತಾನ್, ಹೈದರಾಲಿ ಕೂಡ ರಾಜರು. ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ್ದರು. ಅಂತಹವರ ಜಯಂತಿ ನಿಲ್ಲಿಸಿಬಿಟ್ರಲ್ಲಾ ಯಡಿಯೂರಪ್ಪ, ಯಾಕ್ರಿ ನಿಮಗೆ ಆ ಧರ್ಮದ ಮೇಲೆ ದ್ವೇಷ. ಅವು ಮನುಷ್ಯರಲ್ವಾ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ತಾಲ್ಲೂಕಿನ ಹೊಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದು ನಾನು, ಏನು ಯಡಿಯೂರಪ್ಪ, ಜಗದೀಶ ಶೆಟ್ಟರ್ ಮಾಡಿದ್ರಾ?, ಕೆಂಪೇಗೌಡ ಜಯಂತಿ ಮಾಡಿದ್ದು ನಾನು, ದೇವೇಗೌಡ, ಕುಮಾರಸ್ವಾಮಿ ಮಾಡಿದ್ರಾ ಹಾಗೆಯೇ ಟಿಪ್ಪು ಜಯಂತಿ ಮಾಡಿದ್ದೆನು. ಆದರೆ ಯಡಿಯೂರಪ್ಪ ನಿಲ್ಲಿಸಿಬಿಟ್ರು. ಇವೆಲ್ಲಾ ಬಿಜೆಪಿಯವರ ರಾಜಕೀಯ ಗಿಮಿಕ್ಕು. ಏನ್ಮಾಡೋದು ಜನ ಬಿಜೆಪಿಗೆ ವೋಟ್ ಹಾಕ್ತಾರೆ. ನನಗೆ ಅರ್ಥ ಆಗ್ತಿಲ್ಲ ಎಂದರು.
’ಸಿದ್ದರಾಮಯ್ಯ ಪರ್ಮನೆಂಟ್ ವಿರೋಧ ಪಕ್ಷದ ನಾಯಕ ಎಂದು ಯಡಿಯೂರಪ್ಪ ಹೇಳ್ತಾರೆ. ಇವ್ರೇನು ಪರ್ಮನೆಂಟ್ ಸಿಎಂ ಆಗಿರ್ತಾರಾ‘ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ’ಜನರು ಬುದ್ಧಿವಂತರಾಗಬೇಕು. ಬಹಳ ಹುಷಾರ್ ಆಗಿರಬೇಕು. ಇಲ್ಲದಿದ್ದರೆ ಇಂತಹವರ ಕೈಗೆ ಅಧಿಕಾರ ಸಿಕ್ಕುಬಿಡುತ್ತೆ‘ ಎಂದು ಹೇಳಿದರು.
’ನಾನು ಅಧಿಕಾರದಲ್ಲಿದ್ದಾಗ ಎಲ್ಲ ಬಡವರಿಗೂ ಅನ್ನಭಾಗ್ಯ, ಕೃಷಿ ಭಾಗ್ಯ, ಸಾಲಮನ್ನಾ, ಶಾದಿ ಭಾಗ್ಯ, ಕ್ಷೀರಭಾಗ್ಯ, ಶಾಲಾ ಮಕ್ಕಳಿಗೆ ಶೂ ಕೊಟ್ಟಿದ್ದೆನು. ಎಲ್ಲವನ್ನೂ ನಾನೇ ಮಾಡಿದ್ದು. ಇವನೇನು (ಯಡಿಯೂರಪ್ಪ) ಮಾಡಿದ್ದಾನೆ ಎಂದು ಕೇಳಿದ ಸಿದ್ದರಾಮಯ್ಯ, ವೋಟ್ ಮಾತ್ರ ಬಿಜೆಪಿಗೆ ಹಾಕುತ್ತೀರಿ. ನೀವು ಹಾಕುತ್ತೀರಿ ಎಂದು ಹೇಳುತ್ತಿಲ್ಲ. ಬಿಜೆಪಿಗೆ ವೋಟ್ ಹಾಕೋರಿಗೆ ಹೇಳ್ತಿದ್ದೀನಿ‘ ಎಂದರು.
’ಇವ್ರೇನು (ಬಿಜೆಪಿಯವರು) 113 ಸೀಟ್ ಗೆದ್ದಿದ್ರಾ.. 104 ಸೀಟ್ ಗೆದ್ದಿದ್ದರು. ಮತ್ತೆ ಸಿಎಂ ಕುರ್ಚಿಗೆ ಬಂದು ಕುಳಿತುಬಿಟ್ಟ ಗಿರಾಕಿ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಯಾರದೋ ದುಡ್ಡು ಯಲ್ಲಮನ್ನ ಜಾತ್ರೆ ನಡೆಸ್ತಿದ್ದಾರೆ‘ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.