ಬೆಂಗಳೂರು: ವೈದ್ಯಕೀಯ ಸೀಟು ಪಡೆಯಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ರ‍್ಯಾಂಕಿಂಗ್ ಕಾರ್ಡ್ ಸೇರಿದಂತೆ ಪೂರ್ಣ ದಾಖಲೆಗಳನ್ನೇ ನಕಲು ಮಾಡಿರುವ ಪ್ರಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪತ್ತೆ ಮಾಡಿದೆ.
ಎರಡು ಪ್ರಕರಣಗಳಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಶಿವಮೊಗ್ಗ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಮುಂದಾಗಿದ್ದರು. ಕೆಇಎ ಪೋರ್ಟಲ್‌ನಲ್ಲಿ ಸೀಟು ಹಂಚಿಕೆ ವಿವರಗಳು ಲಭ್ಯವಾಗದ ಕಾರಣ ಈ ಎರಡು ಕಾಲೇಜುಗಳ ಆಡಳಿತ ಮಂಡಳಿ ಕೆಇಎ ಸಂಪರ್ಕಿಸಿದೆ. ಆಗ ವಂಚನೆಯ ಪ್ರಕರಣ ಪತ್ತೆಯಾಗಿದೆ. ಮೂರೂ ಪ್ರಕರಣಗಳಲ್ಲಿ ವಂಚನೆ ಎಸಗಿದವರು ವಿದ್ಯಾರ್ಥಿನಿಯರು.
ನೀಟ್‌ನ ನಕಲಿ ದಾಖಲೆಯ ಜತೆಗೆ, ಶುಲ್ಕ ಪಾವತಿಸಿದ ರಸೀದಿ, ವೈದ್ಯಕೀಯ ಕಾಲೇಜು ಪ್ರವೇಶ ಹಂಚಿಕೆಯ ಪತ್ರಗಳನ್ನೂ ನಕಲು ಮಾಡಿ ವಂಚಿಸಲು ಪ್ರಯತ್ನಿಸಿದ ಆರೋಪದ ಮೇಲೆ ಕೆ.ಎಂ.ಭುವನೇಶ್ವರಿ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋರ್ಟ್‌ಗೂ ನಕಲಿ ದಾಖಲೆ ಸಲ್ಲಿಕೆ
‘ಮತ್ತೊಬ್ಬ ವಿದ್ಯಾರ್ಥಿನಿ ನಕಲಿ ದಾಖಲೆ ಸೃಷ್ಟಿಸಿ ವೈದ್ಯಕೀಯ ಸೀಟು ಪಡೆಯಲು ಪ್ರಯತ್ನಿಸಿದ್ದಾರೆ. ಕಾಲೇಜಿಗೆ ಪ್ರವೇಶ ಪಡೆಯಲು ವಿಫಲರಾಗಿದ್ದಾರೆ. ‘ಉತ್ತಮ ರ‍್ಯಾಂಕಿಂಗ್ ಇದ್ದರೂ ಪ್ರವೇಶ ನಿರಾಕರಿಸಲಾಗಿದೆ’ ಎಂಬ ಕಾರಣ ನೀಡಿ ಕೋರ್ಟ್ ಮೆಟ್ಟಿಲೇರಿದ್ದಾರೆ.
‘ಉಳಿದ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಭವಿಷ್ಯದಲ್ಲಿ ಇಂತಹ ವಂಚನೆ ಪ್ರಕರಣದಲ್ಲಿ ಭಾಗಿಯಾಗುವುದನ್ನು ತಡೆಯಲು ಅಂತಹ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗುವುದು. ಕೋರ್ಟ್‌ಗೂ ಮೂಲದಾಖಲೆ ಸಲ್ಲಿಸಲಾಗುವುದು’ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ಕೆಇಎ ಎಸ್.ರಮ್ಯಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.