ADVERTISEMENT

ರೋಹಿಣಿ ಸಿಂಧೂರಿ ಸಂದೇಶ ಕಳುಹಿಸಿದ್ದು ಯಾರಿಗೆ?: ರೂಪಾಗೆ ನೆಟ್ಟಿಗರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 5:58 IST
Last Updated 21 ಫೆಬ್ರುವರಿ 2023, 5:58 IST
   

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ನಡುವಿನ ಜಗಳ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ.

ತಮ್ಮ ಫೇಸ್‌ಬುಕ್‌ನಲ್ಲಿ ಮೆಸೇಜ್‌ ಡಿಲೀಟ್‌ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡಿರುವ ಡಿ.ರೂಪಾ, ‘Get well soon ಅಂತಾ ನನಗೆ ಹೇಳಿದ್ದಾರಲ್ಲ ಪತ್ರಿಕಾಗೋಷ್ಟಿಯಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ ಡಿಲೀಟ್‌ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತನಾಡುತ್ತಾರಾ?’ ಎಂದು ಖಾರವಾಗಿ ಪ್ರಶ್ನಿಸಿದ್ದರು.

ಸಾಕಷ್ಟು ನೆಟ್ಟಿಗರು ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಈ ಸಂದೇಶವನ್ನು ಯಾರಿಗೆ ಕಳುಹಿಸಿದ್ದರು ಎಂಬುದನ್ನು ನೀವೇಕೆ ಬಹಿರಂಗಪಡಿಸುತ್ತಿಲ್ಲ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ADVERTISEMENT

ರೋಹಿಣಿ ಸಿಂಧೂರಿ ಅವರು ಕಳುಹಿಸಿದ ಸಂದೇಶ ರೂಪಾ ಅವರಿಗೆ ಸಿಕ್ಕಿದ್ದು? ರೂಪಾ ಅವರಿಗೆ ಇದನ್ನು ಹಂಚಿಕೊಂಡವರು ಯಾರು? ರೂಪಾ ಅವರ ಅತ್ಯಾಪ್ತರಿಗೆ ಸಿಂಧೂರಿ ಈ ಸಂದೇಶ ಕಳುಹಿಸಿರಬಹುದಾ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಆದರೆ ಸಂದೇಶ ಯಾರಿಗೆ ಕಳುಹಿಸಲಾಗಿದೆ ಎಂಬ ಕುರಿತು ರೂಪಾ ಇದುವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ರೋಹಿಣಿ ಕೂಡ ರೂಪಾ ಹಂಚಿಕೊಂಡ ಸಂದೇಶಗಳು ತಮ್ಮದೇ ಎಂದು ಎಲ್ಲಿಯೂ ಸಮರ್ಥಿಸಿಕೊಂಡಿಲ್ಲ. ತಾವು ಯಾರಿಗೆ ಸಂದೇಶ ಕಳುಹಿಸಿದ್ದೇನೆ ಎಂದು ರೂಪಾ ಹೆಸರು ಬಹಿರಂಗಪಡಿಸಲಿ ಎಂದು ರೋಹಿಣಿ ಸಿಂಧೂರಿ ಕೂಡ ಆಗ್ರಹಿಸಿದ್ದಾರೆ.

ಇದರ ನಡುವೆ ಅಧಿಕಾರಿಗಳ ಬೀದಿಜಗಳದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಶಿಸ್ತು ಉಲ್ಲಂಘನೆ, ದುರ್ನಡತೆ, ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಇಬ್ಬರಿಗೂ ನೋಟಿಸ್‌ ನೀಡಲಾಗಿದೆ.

ಇನ್ನೊಂದೆಡೆ ‘ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ನನ್ನ ವೈಯಕ್ತಿಕ ಫೋಟೊ ಬಳಸಿಕೊಂಡು ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ’ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಾರೆ.

‘ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ? ಈ ರೀತಿಯ ಚಿತ್ರಗಳನ್ನು ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ತನಿಖೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು’ ಎಂದು ರೂಪಾ ಸೋಮವಾರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.