ADVERTISEMENT

ರಾಜ್ಯದಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಹೆಚ್ಚಳ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಪ್ರಕರಣಗಳ ವಿಶ್ಲೇಷಣೆ; ರೋಗಿಗಳ ನೋಂದಣಿಯಿಂದ ದೃಢ

ವರುಣ ಹೆಗಡೆ
Published 4 ಜುಲೈ 2024, 20:22 IST
Last Updated 4 ಜುಲೈ 2024, 20:22 IST
.
.   

ಬೆಂಗಳೂರು: ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಪೀಡಿತರಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೋಂದಣಿ ಪ್ರಕಾರ ವರದಿಯಾಗುತ್ತಿರುವ ವಾರ್ಷಿಕ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 31.9ರಷ್ಟು ಪ್ರಕರಣಗಳು ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳಾಗಿವೆ.

ಸಂಸ್ಥೆಯಲ್ಲಿ ವಾರ್ಷಿಕ ಸರಾಸರಿ 21 ಸಾವಿರ ಕ್ಯಾನ್ಸರ್ ‍ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿದ್ದು, 3.6 ಲಕ್ಷ ಮಂದಿ ‘ಫಾಲೋ ಅಪ್’ ಚಿಕಿತ್ಸೆಗೆ ಭೇಟಿ ನೀಡುತ್ತಿದ್ದಾರೆ. ಸಂಸ್ಥೆಯು ರೋಗಿಗಳ ನೋಂದಣಿ ಆಧಾರ ಪ್ರಕರಣಗಳನ್ನು ವಿಶ್ಲೇಷಿಸಿದೆ. ಪುರುಷರಲ್ಲಿ ದೃಢಪಡುತ್ತಿರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 46ರಷ್ಟು ಹಾಗೂ ಮಹಿಳೆಯರಲ್ಲಿ ಖಚಿತಪಡುತ್ತಿರುವ ಒಟ್ಟು ಪ್ರಕರಣಗಳಲ್ಲಿ ಶೇ 20.2ರಷ್ಟು ತಂಬಾಕು ಉತ್ಪನ್ನ ಸಂಬಂಧಿ ಕ್ಯಾನ್ಸರ್ ಪ್ರಕರಣಗಳಾಗಿವೆ.

ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ ಹಾಗೂ ಸರ್ಕಾರೇತರ ಸಂಸ್ಥೆಗಳು ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಇಷ್ಟಾಗಿಯೂ ನಗರದಲ್ಲಿ ಕೋಟ್ಪಾ ಕಾಯ್ದೆ (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಉಲ್ಲಂಘಿಸಿ, ಶಾಲಾ–ಕಾಲೇಜುಗಳ ಆವರಣ ಸೇರಿ ವಿವಿಧೆಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ತಂಬಾಕು ಉತ್ಪನ್ನಗಳನ್ನು ಸೇವಿಸುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಕಿದ್ವಾಯಿ ಸಂಸ್ಥೆ ಪ್ರಕಾರ, 14 ವರ್ಷದೊಳಗಿನ ಮಕ್ಕಳಲ್ಲಿ ದೃಢಪಡುತ್ತಿರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 3.8ರಷ್ಟು ತಂಬಾಕು ಉತ್ಪನ್ನ ಸಂಬಂಧಿ ಕ್ಯಾನ್ಸರ್ ಪ್ರಕರಣಗಳಾಗಿವೆ.

ADVERTISEMENT

ಶೇ 1ರಷ್ಟು ಹೆಚ್ಚಳ: ಸಂಸ್ಥೆಯ ಪ್ರಕಾರ ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ, ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ಪ್ರಕಾರ ನಗರದಲ್ಲಿ ವಾರ್ಷಿಕ ಶೇ 1ರಷ್ಟು ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ.

‘ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗಲು ತಂಬಾಕು ಉತ್ಪನ್ನಗಳ ಸೇವನೆ ಪ್ರಮುಖ ಕಾರಣ. ತಂಬಾಕು ಉತ್ಪನ್ನಗಳನ್ನು ಬಳಸುವಂತೆ ಯುವಜನರು ಮತ್ತು ಮಕ್ಕಳಿಗೆ ತಂಬಾಕು ಉತ್ಪನ್ನಗಳ ಕಂಪನಿಗಳು ಆಮಿಷ ಒಡ್ಡುತ್ತಿವೆ. ಮಹಿಳೆಯರಲ್ಲಿಯೂ ತಂಬಾಕು ಉತ್ಪನ್ನ ಸೇವನೆ ಹೆಚ್ಚಳವಾಗಿದೆ. ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ವಾಯು ಮಾಲಿನ್ಯದಿಂದಲೂ ವಿವಿಧ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.

ಪರೋಕ್ಷ ಧೂಮಪಾನದಿಂದಲೂ ಸಮಸ್ಯೆ

ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನ. ಮಕ್ಕಳು ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿರಂತರ ಪರೋಕ್ಷ ಧೂಮಪಾನದಿಂದಲೂ ಕ್ಯಾನ್ಸರ್ ಪೀಡಿತರಾಗುವ ಸಾಧ್ಯತೆಯಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವಿಶ್ಲೇಷಿಸಿದೆ. ರಾಜ್ಯದಲ್ಲಿ ಸುಮಾರು 2.5 ಕೋಟಿ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇವರಲ್ಲಿ ಶೇ 16.3 ರಷ್ಟು ಮಂದಿ ಹೊಗೆರಹಿತ ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.