ADVERTISEMENT

ಐಹೊಳೆ; ಬಯಲು ಬಹಿರ್ದೆಸೆಗೆ ನೆಲೆ- ಪೌಳಿಯಲ್ಲೇ ಬಯಲು ಮಲ ವಿಸರ್ಜನೆ

ಪುರಾತತ್ವ ಸ್ಮಾರಕಗಳ ಆವರಣದ ಅತಿಕ್ರಮಣ

ವೆಂಕಟೇಶ ಜಿ.ಎಚ್.
Published 15 ಏಪ್ರಿಲ್ 2021, 1:26 IST
Last Updated 15 ಏಪ್ರಿಲ್ 2021, 1:26 IST
ಐಹೊಳೆಯ ತ್ರಯಂಬಕೇಶ್ವರ ದೇವಸ್ಥಾನ ಸ್ಮಾರಕಗಳ ಪರಿಸರದಲ್ಲಿ ಮಹಿಳೆಯೊಬ್ಬರು ಬಯಲು ಶೌಚಕ್ಕೆ ಹೊರಟ ನೋಟ                   ಚಿತ್ರಗಳು: ಸಂಗಮೇಶ ಬಡಿಗೇರ
ಐಹೊಳೆಯ ತ್ರಯಂಬಕೇಶ್ವರ ದೇವಸ್ಥಾನ ಸ್ಮಾರಕಗಳ ಪರಿಸರದಲ್ಲಿ ಮಹಿಳೆಯೊಬ್ಬರು ಬಯಲು ಶೌಚಕ್ಕೆ ಹೊರಟ ನೋಟ        ಚಿತ್ರಗಳು: ಸಂಗಮೇಶ ಬಡಿಗೇರ   

ಬಾಗಲಕೋಟೆ: ’ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು‘ ಎಂಬ ಶ್ರೇಯ ಹೊಂದಿರುವ ಇಲ್ಲಿನ ಜಾಗತಿಕ ಪ್ರವಾಸಿ ತಾಣ ಐಹೊಳೆಯಲ್ಲಿ ಚಾಲುಕ್ಯರ ಕಾಲದ ಹಲವು ಸ್ಮಾರಕಗಳು ಈಗ
ಸ್ಥಳೀಯರ ಪಾಲಿಗೆ ಬಯಲು ಶೌಚಕ್ಕೆ ನೆಲೆಯಾಗಿವೆ.

ಸ್ಮಾರಕಗಳ ಆವರಣ, ಹಿಂಭಾಗದ ಮರೆ, ಗಿಡ–ಗಂಟೆಗಳ ನಡುವೆ ಗ್ರಾಮಸ್ಥರು ನಿತ್ಯ ನಸುಕು–ಬೈಗಿನಲ್ಲಿ ಚೊಂಬು ಹಿಡಿದು ಬಹಿರ್ದೆಸೆಗೆ ತೆರಳುತ್ತಾರೆ. ಮನೆಗಳ ಎದುರು ಇರುವ ಸ್ಮಾರಕಗಳ ಕಟ್ಟೆಯ ಮೇಲೆ ಮಕ್ಕಳು ಶೌಚಕ್ಕೆ ಕುಳಿತ ದೃಶ್ಯ ಕಾಣಸಿಗುತ್ತವೆ.

’ಪ್ರಜಾವಾಣಿ‘ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ 12ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಶೈಲಿಯ ರಚನೆ ಹೊಂದಿರುವ ತ್ರಯಂಬಕ ದೇವಾಲಯ ಸಂಕೀರ್ಣದ ಒಳ ಆವರಣವನ್ನು ಗ್ರಾಮಸ್ಥರು ಬಯಲು ಶೌಚಕ್ಕೆ ಬಳಕೆ ಮಾಡುತ್ತಿರುವುದು ಕಂಡುಬಂದಿತು. ಪಕ್ಕದ ರಾಚಿ ಗುಡಿ ಸಂಕೀರ್ಣದಲ್ಲೂ ಮೂಗು ಮುಚ್ಚಿಕೊಂಡು ಒಳಗೆ ತೆರಳಬೇಕಾಯಿತು.

ADVERTISEMENT

ಗ್ರಾಮದಲ್ಲಿ ಸುತ್ತಾಡಿದಾಗ ಬಹುತೇಕಸ್ಮಾರಕಗಳು ಸ್ಥಳೀಯರಿಂದ ಅತಿಕ್ರಮಣಕ್ಕೆ ತುತ್ತಾಗಿರುವುದು ಕಂಡುಬಂದಿತು. ದನ, ಕುರಿ–ಮೇಕೆ ಕಟ್ಟಲು, ಚಕ್ಕಡಿ ಬಂಡಿ, ಟ್ರ್ಯಾಕ್ಟರ್ ನಿಲ್ಲಿಸಲು, ಕೃಷಿ ಉಪಕರಣ ಇಡಲು ಬಳಕೆಯಾಗುತ್ತಿವೆ. ಇನ್ನೂ ಕೆಲವು ಸ್ಮಾರಕಗಳ ಆವರಣ, ಪ್ರಾಚೀನ ದೇಗುಲಗಳ ಪೌಳಿ, ಶಿಲಾ ಮಂಟಪಗಳ ಮೇಲೆ ಧಾನ್ಯ ಹರಡಲಾಗುತ್ತಿದೆ. ಬಟ್ಟೆ ಒಣಗಿಸಲು ಹಾಕಲಾಗುತ್ತಿದೆ. ಧಾನ್ಯ ಚೀಲಗಳ ಸಂಗ್ರಹಿಸಿಡಲು, ಕಟ್ಟಿಗೆ ಒಟ್ಟಲು ಬಳಸಲಾಗುತ್ತಿದೆ.

ಸ್ಮಾರಕಗಳಿಗೆ ತೆರಳುವ ರಸ್ತೆಯ ಎರಡೂ ಬದಿಯಲ್ಲಿ ಪ್ರವಾಸಿಗರನ್ನು ತಿಪ್ಪೆಗಳು, ಮುಳ್ಳಿನ ಹಾದಿ
ಸ್ವಾಗತಿಸುತ್ತವೆ. ಹೀಗಾಗಿ ದೇಶ–ವಿದೇಶಗಳಿಂದ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಮೂಗು ಮುಚ್ಚಿಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

ವಿಶೇಷವೆಂದರೆ ಐಹೊಳೆಯಲ್ಲಿ ಕಾಣಸಿಗುವ ಎಲ್ಲ ಸ್ಮಾರಕಗಳ ಎದುರು ’ಸಂರಕ್ಷಿತ ಪ್ರದೇಶ‘ ಎಂದು ಭಾರತೀಯ ಪುರಾತತ್ಚ ಇಲಾಖೆ (ಎಎಸ್‌ಐ) ಫಲಕ ಅಳವಡಿಸಿದೆ. ’ಸ್ಮಾರಕಗಳ ಪರಿಸರ ದುರುಪಯೋಗಪಡಿಸಿಕೊಂಡರೆ ಭಾರೀ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸುವ ಉಲ್ಲೇಖವನ್ನು ಅಲ್ಲಿನ ವಿದ್ಯಮಾನಗಳು ಅಣಕಿಸುವಂತಿವೆ‘ ಎಂದು ಬಾದಾಮಿಯ ಪ್ರವಾಸಿ ಮಾರ್ಗದರ್ಶಿ ಇಷ್ಟಲಿಂಗ ಶಿರಸಿ ಹೇಳುತ್ತಾರೆ.

ಐಹೊಳೆಯ ಸ್ಮಾರಕದ ಒಳಗೆ ಸ್ಥಳೀಯರು ಧಾನ್ಯಗಳ ಚೀಲ ಸಂಗ್ರಹಿಸಿ ಇಟ್ಟಿರುವುದು

ನನೆಗುದಿಗೆ ಬಿದ್ದ ಸ್ಥಳಾಂತರ ಕಾರ್ಯ...

ಐಹೊಳೆಯಲ್ಲಿ 100ಕ್ಕೂ ಹೆಚ್ಚು ಪ್ರಾಚೀನ ಸ್ಮಾರಕಗಳಿವೆ. ಅವುಗಳಲ್ಲಿ ದುರ್ಗಾ ದೇವಸ್ಥಾನ ಸಂಕೀರ್ಣ, ಹುಚ್ಚಿಮಲ್ಲಿಗುಡಿ, ಲಾಡಖಾನ್ ಗುಡಿ, ಹುಚ್ಚಪ್ಪಯ್ಯನಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ,ಮೇಗುತಿ ದೇವಾಲಯ, ಜೈನ ಬಸದಿಗಳು ಮಾತ್ರ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ನಿರಂತರ ಕಣ್ಗಾವಲಿನಲ್ಲಿವೆ. ಉಳಿದವು ನಿರ್ಲಕ್ಷ್ಯಕ್ಕೀಡಾಗಿವೆ.ಕೆಲವು ಸ್ಮಾರಕಗಳಲ್ಲಿ ಸ್ಥಳೀಯರು ವಾಸವಿದ್ದಾರೆ. ಹೀಗಾಗಿ ಅಲ್ಲಿನ ಜನವಸತಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯಕ್ಕೆ ದಶಕದ ಹಿಂದೆಯೇ ಚಾಲನೆ ದೊರೆತಿದೆ. ಆದರೆ ಅದಿನ್ನೂ ಕಾರ್ಯಗತಗೊಂಡಿಲ್ಲ. 2018ರ ಅಕ್ಟೋಬರ್ 1ರಂದು ಐಹೊಳೆಯಲ್ಲಿ, ಅಂದಿನ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ನೇತೃತ್ವದಲ್ಲಿ ನಡೆದ ಗ್ರಾಮಸಭೆಯಲ್ಲಿ 1,052 ಮನೆಗಳ ಸ್ಥಳಾಂತರ ಕಾರ್ಯಕ್ಕೆ ಒಪ್ಪಿಗೆ ಕೂಡ ಸಿಕ್ಕಿತ್ತು. ಅದಕ್ಕೆ 51 ಎಕರೆ ಜಮೀನು ಕೂಡ ಗುರುತಿಸಲಾಗಿದೆ.

***
ಇಲಾಖೆಯಲ್ಲಿ ಶೇ 60ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸ್ಮಾರಕಗಳ ಮೇಲೆ ಕಣ್ಗಾವಲು ಕಷ್ಟವಾಗಿದೆ. ಶೀಘ್ರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು.

- ವಿಠ್ಠಲ ಎಸ್.ಬಡಿಗೇರ, ಸೂಪರಿಂಟೆಂಡೆಂಟ್, ಎಎಸ್‌ಐ ಧಾರವಾಡ ವೃತ್ತ

***
ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಭಾರತೀಯ ಪುರಾತತ್ವ ಇಲಾಖೆಯವರನ್ನು ಸೇರಿಸಿ ಸ್ಮಾರಕಗಳ ಪರಿಸರವನ್ನು ಬಯಲು ಶೌಚಕ್ಕೆ ಬಳಕೆ ಮಾಡಿಕೊಳ್ಳದಂತೆ ತಡೆಯಲು ಮುಂದಾಗಲಿದ್ದೇವೆ.

- ರಾಮಣ್ಣ ಕುರಿ, ಐಹೊಳೆ ಸ್ಥಳಾಂತರ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.