ADVERTISEMENT

ಅರಣ್ಯ ಜಾಗದಲ್ಲಿ ಟೋಲ್‌ ಪ್ಲಾಜಾ: ತಪ್ಪಿತಸ್ಥ ಅಧಿಕಾರಿಗಳ ವಿವರಕ್ಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 23:18 IST
Last Updated 19 ಜೂನ್ 2024, 23:18 IST
<div class="paragraphs"><p> ಟೋಲ್‌ ಪ್ಲಾಜಾ( ಪ್ರಾತಿನಿಧಿಕ ಚಿತ್ರ)</p></div>

ಟೋಲ್‌ ಪ್ಲಾಜಾ( ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಚತುಷ್ಪಥ ಕಾಮಗಾರಿ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಟ್ಟಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಟೋಲ್‌ ಪ್ಲಾಜಾ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಪ್ರಕರಣದ ಸಮಗ್ರ ವರದಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿವರಗಳನ್ನು ಕೂಡಲೇ ಒದಗಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಾಕೀತು ಮಾಡಿದ್ದಾರೆ. 

’ಅರಣ್ಯ ಪ್ರದೇಶದಲ್ಲಿ ಒತ್ತುವರಿಗೆ ಕಾರಣರಾದ ಅರಣ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿವರಗಳನ್ನು ಒದಗಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ನಾಲ್ಕು ಬಾರಿ ಸ್ಪಷ್ಟ ನಿರ್ದೇಶನಗಳನ್ನು ನೀಡಿತ್ತು. ಆದರೂ, ಈವರೆಗೆ ಮಾಹಿತಿ ಒದಗಿಸಿಲ್ಲ. ಈ ವಿಷಯದಲ್ಲಿ ಕೆನರಾ ವೃತ್ತದ ಹಿರಿಯ ಅಧಿಕಾರಿಗಳು ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಂರಕ್ಷಣಾ ಕಾಯ್ದೆ–1980 ಉಲ್ಲಂಘಿಸಿದವರ ಪೂರ್ಣ ಮಾಹಿತಿಯನ್ನು ಜರೂರು ಒದಗಿಸಬೇಕು’ ಎಂದು ಅವರು ಸೂಚಿಸಿದ್ದಾರೆ. 

ADVERTISEMENT

ನಿಯಮ ಉಲ್ಲಂಘನೆ ಪ್ರಕರಣದಲ್ಲಿ ರೋಡಿಕ್‌ ಕನ್ಸಲ್ಟೆಂಟ್‌ ಕಂಪನಿಯ ಹಿರಿಯ ಹೆದ್ದಾರಿ ಎಂಜಿನಿಯರ್‌ ಹಾಗೂ ಎಕಾಮ್‌ ಏಷ್ಯಾ ಕಂಪನಿಯ ಇಬ್ಬರು ಎಂಜಿನಿಯರ್‌ ಲೋಪ ಎಸಗಿದ್ದಾರೆ ಎಂದು ಕೆನರಾ ವೃತ್ತದ ಸಿಸಿಎಫ್ ಅವರು ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅರಣ್ಯ ಹಾಗೂ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸಚಿವಾಲಯ ಬೊಟ್ಟು ಮಾಡಿ ತೋರಿಸಿತ್ತು. 

ಟೋಲ್‌ ಪ್ಲಾಜಾಗೆ ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ಹೆದ್ದಾರಿ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸಿತ್ತು. ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ 2019ರ ಆಗಸ್ಟ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಸೀಬರ್ಡ್‌ ಯೋಜನೆಗಾಗಿ 2,259 ಹೆಕ್ಟೇರ್ ಅರಣ್ಯ ಬಳಕೆಗೆ 1986ರಲ್ಲೇ ಒಪ್ಪಿಗೆ ನೀಡಲಾಗಿತ್ತು. ಹೆದ್ದಾರಿ ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರಕ್ಕೆ 9.13 ಹೆಕ್ಟೇರ್ ಅರಣ್ಯವನ್ನು ರಕ್ಷಣಾ ಇಲಾಖೆಯು 2014ರಲ್ಲಿ ನೀಡಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರವು 6.68 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಈ ಹಿಂದೆ ಅನುಮೋದನೆ ಪಡೆದಿತ್ತು. ಇದೀಗ 6 ಎಕರೆ ಅರಣ್ಯ ಬಳಸಲು ಒಪ್ಪಿಗೆ ಕೇಳಿದೆ. ಇದಕ್ಕಾಗಿ ದಾಖಲೆಗಳನ್ನು ಹಾಗೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ 1.02 ಹೆಕ್ಟೇರ್ ಪ್ರದೇಶವು ಅರಣ್ಯವಾಗಿ ಉಳಿದಿಲ್ಲ. ಹಾಗಾಗಿ, 1.44 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಒಪ್ಪಿಗೆ ನೀಡಬೇಕಿದೆ. ಹೆದ್ದಾರಿ ವಿಸ್ತರಣೆ ಹಾಗೂ ನಿರ್ವಹಣೆಗೆ ಟೋಲ್‌ ಪ್ಲಾಜಾ ಅತೀ ಅಗತ್ಯ’ ಎಂದು ವರದಿ ಸಲ್ಲಿಸಿದ್ದರು. ಅರಣ್ಯ ಭೂಮಿ ಬಳಕೆಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಲೋಪ ಎಸಗಿರುವುದು ಬೆಳಕಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.