ADVERTISEMENT

ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ: ಟೊಮೆಟೊ ದರ ಮತ್ತೆ ದುಬಾರಿ

ಕುಸಿದ ಇಳುವರಿ * ಕೆ.ಜಿಗೆ ₹ 70ರಿಂದ 80

ಕೆ.ಓಂಕಾರ ಮೂರ್ತಿ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಮಾರಾಟ
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಮಾರಾಟ   

ಕೋಲಾರ: ವಾರದ ಹಿಂದೆಯಷ್ಟೇ ₹30–₹40ರಷ್ಟಿದ್ದ ಕೆ.ಜಿ. ಟೊಮೆಟೊ ಬೆಲೆ ನಾಲ್ಕೈದು ದಿನಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ₹70ರಿಂದ ₹80 ರಂತೆ ಮಾರಾಟವಾಗುತ್ತಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಉತ್ತಮ ಗುಣಮಟ್ಟದ 15 ಕೆ.ಜಿ. ತೂಕದ ಬಾಕ್ಸ್‌ ಟೊಮೆಟೊ ₹1,100 ರವರೆಗೆ ಮಾರಾಟವಾಗುತ್ತಿದೆ. ಕೆ.ಜಿ ಟೊಮೆಟೊಗೆ ಸರಾಸರಿ ₹73 ದರ ಇದೆ. 

ಸೋಮವಾರ ಟೊಮೆಟೊ ಆವಕ ಪ್ರಮಾಣ 16,456 ಕ್ವಿಂಟಲ್‌ (1.10 ಲಕ್ಷ ಬಾಕ್ಸ್‌) ಇತ್ತು. ಕಳೆದ ತಿಂಗಳು ಸರಾಸರಿ 25 ಸಾವಿರ ಕ್ವಿಂಟಲ್‌ ಆವಕವಾಗುತ್ತಿತ್ತು. ಮಾರುಕಟ್ಟೆ‌ಗೆ ಟೊಮೆಟೊ ತಂದಿದ್ದ ರೈತರು ಹೆಚ್ಚಿನ ಬೆಲೆಗೆ ಮಾರಾಟವಾದ್ದರಿಂದ ನಿಟ್ಟುಸಿರು ಬಿಡುತ್ತಿದ್ದಾರೆ. 

ADVERTISEMENT

ರೋಗ ಬಾಧೆ, ಕಳಪೆ ಸಸಿಗಳಿಂದಾಗಿ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಇಳುವರಿ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಸಾಲು, ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೊರ ರಾ‌ಜ್ಯಗಳಿಂದಲೂ ಬೇಡಿಕೆ ಹೆಚ್ಚಾಗಿದೆ.  

ಸದ್ಯಕ್ಕೆ ಬಾಂಗ್ಲಾದೇಶಕ್ಕೆ ಕೋಲಾರದಿಂದ ಟೊಮೆಟೊ ಪೂರೈಕೆ ಸ್ಥಗಿತಗೊಂಡಿದೆ. ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಿಂದ ಕೋಲಾರದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಹಾಗಾಗಿ ನಾಲ್ಕೈದು ದಿನಗಳಿಂದ ಧಾರಣೆ ಏರುಗತಿಯಲ್ಲಿದೆ ಎನ್ನುತ್ತಾರೆ ಟೊಮೆಟೊ ಮಂಡಿ ವರ್ತಕರು.

ಟೊಮೆಟೊ ಮಾರಾಟದಲ್ಲಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಯಿಂದ ಬೆಂಗಳೂರು ಅಲ್ಲದೇ ಸುಮಾರು 15ರಿಂದ 20 ರಾಜ್ಯಗಳಿಗೆ ಟೊಮೆಟೊ ಸಾಗಣೆ ಮಾಡಲಾಗುತ್ತದೆ. ಚಿತ್ರದುರ್ಗದ ಚಳ್ಳಕೆರೆ ಸೇರಿದಂತೆ ವಿವಿಧೆಡೆಯ ಟೊಮೆಟೊ ಇಲ್ಲಿನ ಮಾರುಕಟ್ಟೆಗೆ ಬರುತ್ತಿದೆ.

‘ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಪ್ರಮಾಣ ಕಡಿಮೆ ಆಗಿದೆ. ಬೆಳೆಗೆ ವಿವಿಧ ರೋಗಗಳು ಬಾಧಿಸುತ್ತಿದ್ದು, ಗುಣಮಟ್ಟವೂ ತಗ್ಗಿದೆ. ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಿದ್ದ ಕಾರಣ ದರ ಹೆಚ್ಚಳವಾಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಮಾರಾಟ

ಕಳಪೆ ಸಸಿ; ಗುಣಮಟ್ಟ ಕುಸಿತ

ಜಿಲ್ಲೆಯಲ್ಲಿ ಈ ಬಾರಿ ನಾಟಿ ಮಾಡಿದ ಬೆಳೆಯಲ್ಲಿ ಶೇ 50ರಷ್ಟು ಹಾನಿಯಾಗಿದೆ. ಎಲೆ ಮುಟುರು ರೋಗ (ಬಿಳಿ ನೊಣ ಬಾಧೆ) ಸೇರಿದಂತೆ ವಿವಿಧ ರೋಗಗಳು ಬಾಧಿಸುತ್ತಿವೆ. ಕೆಲ ನರ್ಸರಿಗಳಿಂದ ವಿತರಣೆ ಆಗುತ್ತಿರುವ ಕಳಪೆ ಸಸಿಯಿಂದಲೂ ಇಳುವರಿ ತಗ್ಗಿದೆ. ಗೋಲಿ ಗಾತ್ರದಲ್ಲಿ ಕಾಯಿ ಕಾಣಿಸಿಕೊಂಡು ಉದುರಿ ಹೋಗುತ್ತಿವೆ. ಜೊತೆಗೆ ಗುಣಮಟ್ಟವೂ ತಗ್ಗುತ್ತಿದೆ. ಹವಾಮಾನದಲ್ಲಿ ಹಠಾತ್‌ ಬದಲಾವಣೆ ಪರಿಣಾಮ ಬೀರಿದೆ.

‘ಜನವರಿಯವರೆಗೂ ಇದೇ ಬೆಲೆ ಸ್ಥಿರ’ 

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಒಂದು ಬಾಕ್ಸ್‌ (14 ಕೆ.ಜಿ) ಟೊಮೆಟೊ ದರ ಸಗಟು ಮಾರುಕಟ್ಟೆಯಲ್ಲಿ ₹ 1150 ಇದೆ. ಮಧ್ಯಮ ಗುಣಮಟ್ಟದ ಟೊಮೆಟೊ ₹ 700ರಿಂದ 800 ಮತ್ತು ಮೂರನೇ ದರ್ಜೆಯ ಟೊಮೆಟೊ ಒಂದು ಬಾಕ್ಸ್‌ ₹300ರಿಂದ ₹350 ಮಾರಾಟವಾಗುತ್ತಿದೆ.  ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಒಂದು ಕೆ.ಜಿ ಟೊಮೆಟೊ ಬೆಲೆ ₹ 80ರಿಂದ 85 ಇದೆ. ಮಳೆ ಬೀಳುತ್ತಿರುವುದು ಮತ್ತು ರೋಗದ ಕಾರಣದಿಂದ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ವರ್ತಕರು.

‘ಈ ವರ್ಷದ ಜೂನ್ ಜುಲೈನಲ್ಲಿ ಉತ್ತಮ ದರವಿತ್ತು. ಆ ನಂತರ ಬೆಲೆ ಕುಸಿಯಿತು. ಈಗ ಊಜಿ ನೊಣ ಮತ್ತು ಕಾಯಿಯ ಮೇಲೆ ಚುಕ್ಕೆರೋಗ ಹೆಚ್ಚಿದೆ. ಫಸಲು ಕಡಿಮೆ ಇರುವ ಕಾರಣ ಬೇಡಿಕೆ ಇದೆ. ಜನವರಿಯವರೆಗೂ ಈ ಬೆಲೆ ಸ್ಥಿರವಾಗಿ ಇರುತ್ತದೆ’ ಎಂದು ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿ ಗ್ರಾಮದ ರೈತ ಗಣೇಶ್ ಹೇಳಿದರು. ಬಾಗೇಪಲ್ಲಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿಯಿಂದ ಹೊರರಾಜ್ಯಗಳಿಗೂ ಟೊಮೆಟೊ ರವಾನೆ ಆಗುತ್ತದೆ.

ಟೊಮೆಟೊ ಇಳುವರಿ ತಗ್ಗಿದ್ದು ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಕಳೆದ ತಿಂಗಳು 20ರಿಂದ 25 ಸಾವಿರ ಕ್ವಿಂಟಲ್‌ ಅವಕವಿದ್ದದ್ದು ಈಗ 15 ಸಾವಿರ ಕ್ವಿಂಟಲ್‌ಗೆ ಇಳಿದಿದೆ.
–ಕಿರಣ್‌, ಕಾರ್ಯದರ್ಶಿ ಎಪಿಎಂಸಿ ಕೋಲಾರ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಟೊಮೆಟೊ ನಾಟಿ ಕಡಿಮೆ ಆಗಿದೆ. ಸಮೀಕ್ಷೆ ನಡೆಯುತ್ತಿದ್ದು ಎಷ್ಟು ಪ್ರಮಾಣದಲ್ಲಿ ನಾಟಿ ಮಾಡಿದ್ದಾರೆ ಎಷ್ಟು ಫಸಲು ಬಂದಿದೆ ಎಂಬುದು ಗೊತ್ತಾಗುತ್ತದೆ.
–ಕುಮಾರಸ್ವಾಮಿ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.