ಬೆಂಗಳೂರು: ಸಚಿವ ಸಂಪುಟ ರಚನೆ ಕುರಿತಂತೆ ನಾಳೆ ಬೆಳಿಗ್ಗೆ ಅಂತಿಮವಾಗಿ ತಿಳಿಸುತ್ತೇವೆ. ಆ ಬಳಿಕ ಪಟ್ಟಿಯನ್ನು ಪ್ರಕಟ ಮಾಡಬಹುದು ಎಂದು ವರಿಷ್ಗರು ತಿಳಿಸಿದ್ದಾರೆ. ಅವರು ಸೂಚಿಸಿದ ಬಳಿಕ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸುತ್ತೇನೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಿಗ್ಗೆ ಬೇಗ ವರಿಷ್ಠರಿಂದ ಖಚಿತತೆ ಸಿಕ್ಕರೆ ನಾಳೆಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದರು.
ನಾಳೆ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಇದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆ ಮಾಡಲು ಬಹಳ ವಿಷಯಗಳು ಉಳಿದಿಲ್ಲ. ಎರಡು ಮೂರು ವಿಷಯಗಳಿವೆ. ಹಾಗಾಗಿ, ಬೇಗನೆ ನಿರ್ಧಾರವಾಗುವ ವಿಶ್ವಾಸವಿದೆ ಎಂದರು. ಒಂದೆರಡು ಮೂರು ಹೆಸರು ಸೇರಿಸಬೇಕೆ? ಬೇಡವೇ? ಎಂಬುದು ಅಂತಿಮವಾಗಿಲ್ಲ. ಡಿಸಿಎಂ ಯಾರಾಗಬೇಕೆಂಬುದೂ ಅಂತಿಮವಾಗಿಲ್ಲ. ಈ ಎರಡೂ ವಿಚಾರಗಳು ನಾಳೆ ಅಂತಿಮಗೊಳಿಸಿ ಅಂತಿಮಪಟ್ಟಿ ಕೊಡುತ್ತಾರೆ. ಬಳಿಕ ಪಟ್ಟಿಯನ್ನು ಪ್ರಕಟಿಸುತ್ತೇನೆ. ನಾಳೆ ನಿರ್ಧಾರ ಬೆಳಿಗ್ಗೆ ಆಗುತ್ತೆ ಎನ್ನುವ ವಿಶ್ವಾಸ ಇರುವುದರಿಂದ ನಾಳೆ ಮಧ್ಯಾಹ್ನ ಅಥವಾ ಒಳ್ಳೆಯ ಮುಹೂರ್ತ ನೋಡಿಕೊಂಡು ಪ್ರಮಾಣವಚನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದರು.
ಇದೇವೇಳೆ, ನಾಳೆ ಹೈಕಮಾಂಡ್ ಜೊತೆ ಮತ್ತೆ ಚರ್ಚೆ ನಡೆಸುವುದಿಲ್ಲ. ಬೆಳಗ್ಗೆ 6 ಗಂಟೆಯ ವಿಮಾನದಲ್ಲಿ ಬೆಂಗಳೂರಿಗೆ ತೆರಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ.
ಡಿಸಿಎಂ ಬೇಡವೆಂದು ವರಿಷ್ಠರ ಅಭಿಪ್ರಾಯವಿದೆ. ನೀವು ಬೇಕೆನ್ನುತ್ತಿದ್ದೀರೆಂಬ ಮಾತಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು ಅಭಿಪ್ರಾಯಗಳಿರುವುದು ನಿಜ. ಈಗಿರುವ ಪರಿಸ್ಥಿತಿ ನೋಡಿಕೊಂಡು ವರಿಷ್ಠರು ನಿರ್ಣಯ ಮಾಡುತ್ತಾರೆ ಎಂದರು.
ಯಡಿಯೂರಪ್ಪನವರು ತಮ್ಮ ಮಗನನ್ನು ಮಂತ್ರಿ ಮಾಡಬೇಕೆಂದು ಕೇಳಿದ್ದಾರೆ ಎಂಬ ಮಾಹಿತಿ ಇದೆ ಎಂದು ಕೇಳಲಾದ ಪ್ರಶ್ನೆಗೆ, ನನ್ನ ಬಳಿ ಅವರು ಈ ಬಗ್ಗೆ ಹೇಳಿಲ್ಲ. ರಾಷ್ಟ್ರೀಯ ಅಧ್ಯಕ್ಷರ ಜೊತೆ ಬಹುತೇಕವಾಗಿ ನಾಳೆ ಚರ್ಚೆ ನಡೆಸಬಹುದು ಎಂದಷ್ಟೇ ಹೇಳಿದರು. ವರಿಷ್ಠರು ಸಂಸತ್ತಿನ ಕಲಾಪದಲ್ಲಿ ತೊಡಗಿಕೊಂಡಿರುವುದರಿಂದ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಆಡಳಿತಕ್ಕಾಗಿ ಹಿರಿ–ಕಿರಿಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಇದೇ ವೇಳೆ ಕ್ಷೇತ್ರದ ಜನತೆಗೆ ಸಂದೇಶ ರವಾನಿಸಿರುವಶಾಸಕ ಬಿ.ಸಿ.ಪಾಟೀಲ್, 'ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಾಳೆ ಮಧ್ಯಾಹ್ನ 2.15 ಕ್ಕೆ ಸಚಿವನಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಎಂದಿನಂತೆ ನಿಮ್ಮ ಸಹಕಾರ ಕ್ಷೇತ್ರದ ಜನತೆಯ ಆಶೀರ್ವಾದವಿರಲಿ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.