ADVERTISEMENT

ಕಾವಿತೊಟ್ಟ ಕ್ರಾಂತಿಕಾರಿಯಾಗಿದ್ದ ತೋಂಟದಶ್ರೀ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 19:20 IST
Last Updated 24 ಅಕ್ಟೋಬರ್ 2018, 19:20 IST
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಸಾಹಿತಿ ಗೋ.ರು.ಚನ್ನಬಸಪ್ಪ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ವೈ.ಎಸ್‌.ವಿ.ದತ್ತ ಅವರು ತೋಂಟದ ಸಿದ್ಧಲಿಂಗ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ನಮಿಸಿದರು –ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಸಾಹಿತಿ ಗೋ.ರು.ಚನ್ನಬಸಪ್ಪ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ವೈ.ಎಸ್‌.ವಿ.ದತ್ತ ಅವರು ತೋಂಟದ ಸಿದ್ಧಲಿಂಗ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ನಮಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾವಿಯಿಂದಲೇ ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕುವ ಗುಣದವರಾಗಿದ್ದರು’ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುಣಗಾನ ಮಾಡಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಬಯಲು ಪರಿಷತ್ತು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೂರೊಂದು ಅಪಮಾನಗಳು ಬಂದರೂ, ಅವರು ಅಧ್ಯಾತ್ಮಿಕ ನೆಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿದರು’ ಎಂದರು.

ADVERTISEMENT

‘ಸ್ವಾಮೀಜಿಯ ಕ್ರಿಯಾಶಕ್ತಿ ಹೋದರೂ ಅವರ ಜ್ಞಾನಶಕ್ತಿ ನಮ್ಮೊಂದಿಗೆ ಇದೆ. ನಾವು ಅವರ ಮಠದ ಭಕ್ತರಾಗುವ ಬದಲು, ಅವರು ಬದುಕಿನುದ್ದಕ್ಕೂ ಶೋಷಿತರ ಪರವಾಗಿ ಪಾಲಿಸುತ್ತ ಬಂದ ನಿಲುವುಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಅನಿವಾರ್ಯ ಕಾರಣಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ವಚನಗಳನ್ನು ಸಂಪಾದಿಸಿ, ಪ್ರಕಟಿಸುವ ಕಾರ್ಯ ನಿಲ್ಲಿಸಿತ್ತು. ಅದನ್ನು ಕೈಗೆತ್ತಿಕೊಂಡ ಪೂಜ್ಯರು, ಸಾವಿರಾರು ವಚನಗಳನ್ನು ನಾಡಿಗೆ ಕೊಟ್ಟರು’ ಎಂದು ಸ್ಮರಿಸಿದರು.

ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ, ‘ಗೋಕಾಕ್‌ ಕನ್ನಡ ಚಳವಳಿಯಲ್ಲಿ ಭಾಗವಹಿಸಿದ್ದವರೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವ ಪರ ನಿಂತಿದ್ದರು. ವಿ.ವಿ ಸ್ಥಾಪನೆಯ ವಿರುದ್ಧ ನಾನು ಸದನದಲ್ಲಿ ಮಾತನಾಡಿದಾಗ, ಬರೆದಾಗ, ಹಲವಾರು ನಿಂದನೆಗಳು ಬಂದವು. ಆಗ ಸ್ವಾಮೀಜಿ ನನ್ನ ಬೆಂಬಲಕ್ಕೆ ನಿಂತಿದ್ದರು’ ಎಂದು ನೆನಪಿಸಿಕೊಂಡರು.

‘ಸ್ವಾಮೀಜಿ ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದರು. ಅವರಂತೆ ಉಳಿದ ಪೂಜ್ಯರು ಕೂಡ ಹಿಂದೂ ಧರ್ಮದ ಅವೈಜ್ಞಾನಿಕ ಆಚರಣೆಗಳ ಬಗ್ಗೆ ಮಾತನಾಡಬೇಕು, ನಿಲುವು ತಳೆಯಬೇಕು’ ಎಂದು ಅವರು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಾದರ, ‘ಸ್ವಾಮೀಜಿಬೇಸಿಗೆಯ ಒಂದು ದಿನ ಗದಗಿನಿಂದ ಕಾರಿನಲ್ಲಿ ಹೋಗುತ್ತಿದ್ದರಂತೆ. ನಗರದ ಹೊರ ವಲಯದಲ್ಲಿ ಲಂಬಾಣಿ ಸಮುದಾಯದ ಹತ್ತಾರು ಜನರು ಕೂಲಿಗಾಗಿ ಸುಡುಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದು ಹೋಗುತ್ತಿದ್ದುದ್ದನ್ನು ಸ್ವಾಮೀಜಿ ಗಮನಿಸಿದರು. ಆಗ ನಗರದ ಅಂಗಡಿಗೆ ಬಂದು, ಚಪ್ಪಲಿಗಳನ್ನು ಕೊಂಡು, ನಡೆದು ಹೋಗುತ್ತಿದ್ದ ಜನರಿಗೆ ನೀಡಿದ್ದರಂತೆ’ ಎಂದು ಘಟನೆಯೊಂದನ್ನು ಹೇಳಿದರು.

‘ಕೃಪಾಕರ–ಸೇನಾನಿ ನಿರ್ಮಿಸಿದ ಸೀಳುನಾಯಿಗಳ ಕುರಿತ ಸಾಕ್ಷ್ಯಚಿತ್ರವನ್ನುವರ್ಷವೊಂದರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿಸಿದ್ದರು. ಬಳಿಕ ಪ್ರವಚನ ಆರಂಭಿಸಿದರು’ ಎಂದು ಸ್ವಾಮೀಜಿಯ ವನ್ಯಜೀವಿ ಪ್ರೇಮವನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.