ಬೆಂಗಳೂರು: ಜಿಲ್ಲಾ ಪಂಚಾಯತ್‌ನ ₹459 ಕೋಟಿ ಮತ್ತು ತಾಲ್ಲೂಕು ಪಂಚಾಯಿತಿಯ ₹1,494 ಕೋಟಿ ವೆಚ್ಚ ಮಾಡದ ಹಣವನ್ನು ರಾಜ್ಯ ಸಂಚಿತ ನಿಧಿಗೆ ಪಾವತಿಸದೇ ಯಾವುದಕ್ಕೆ ಬಳಸಲಾಗಿದೆ ಎಂಬುದರ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ವಿಧಾನಪರಿಷತ್ತಿನಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೆಚ್ಚ ಮಾಡದ ಹಣವನ್ನು ರಾಜ್ಯ ಸಂಚಿತ ನಿಧಿಗೆ ಪಾವತಿ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಕಡತ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಆ ಹಣ ಸಂಚಿತ ನಿಧಿಗೆ ಪಾವತಿ ಆಗಿರಲಿಲ್ಲ. ಮುಖ್ಯಮಂತ್ರಿಯವರ ಉತ್ತರ ತಪ್ಪು ಎಂಬುದು ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳ ನಿಧಿ 2ರ ವೆಚ್ಚ ಮಾಡದ ಬಾಕಿಯನ್ನು ಖಜಾನೆಗೂ ಜಮಾ ಮಾಡಿಲ್ಲ ಎಂದು ಕರ್ನಾಟಕ ಖಜಾನೆ ಇಲಾಖೆಯೂ ಮಾಹಿತಿ ನೀಡಿದೆ. ಅದರ ದಾಖಲೆಯ ಪ್ರತಿಯನ್ನು ಲಗತ್ತಿಸಲಾಗಿದೆ. ಆದರೆ, ಮುಖ್ಯಮಂತ್ರಿಯವರು ಸದನದಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. 2024 ರ ಜುಲೈ ಅಧಿವೇಶನದಲ್ಲೂ ಇದೇ ಪ್ರಶ್ನೆಯನ್ನು ಕೇಳಿದ್ದೆ, ಆಗಲೂ ರಾಜ್ಯದ ಸಂಚಿತ ನಿಧಿಗೆ ಪುಸ್ತಕ ಹೊಂದಾಣಿಕೆ ಮೂಲಕ ಅದನ್ನು ಜಮೆ ಮಾಡಿರುವುದಾಗಿ ಲಿಖಿತ ಉತ್ತರ ನೀಡಿದ್ದರು.
ಈ ನಿಧಿಯನ್ನು ಅಕ್ರಮವಾಗಿ ಬೇರೆ ಕಡೆಗೆ ವರ್ಗಾಯಿಸಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮುಖ್ಯಮಂತ್ರಿಯವರಿಂದ ರಾಜ್ಯದ ಸಂಚಿತ ನಿಧಿ ಅಸಮರ್ಪಕ ನಿರ್ವಹಣೆ ಮತ್ತು ದುರುಪಯೋಗ ಆಗಿದೆ. ಆದ್ದರಿಂದ ವಿಸ್ತೃತ ತನಿಖೆ ಅಗತ್ಯವಿದೆ. ನೀವು ಮಧ್ಯ ಪ್ರವೇಶಿಸಬೇಕು ಎಂದು ಅರುಣ್, ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.