ADVERTISEMENT

ದಂಡ ಹೆಚ್ಚಳ: ತೈಲ ಸಾಗಣೆ ಸ್ಥಗಿತದ ಎಚ್ಚರಿಕೆ

ಕೇಂದ್ರ ಸಚಿವರಿಗೆ ಒಕ್ಕೂಟದಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 19:42 IST
Last Updated 8 ಸೆಪ್ಟೆಂಬರ್ 2019, 19:42 IST
   

ಬೆಂಗಳೂರು: ‘ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಧಿಸುವ ದಂಡದ ಮೊತ್ತವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಕರ್ನಾಟಕ ತೈಲ ಸಾಗಣೆ ಟ್ಯಾಂಕರ್‌ ಚಾಲಕರು ಹಾಗೂ ಕ್ಲೀನರ್‌ ಒಕ್ಕೂಟದ ಅಧ್ಯಕ್ಷ ಶ್ರೀರಾಮ್ ಒತ್ತಾಯಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿರುವ ಶ್ರೀರಾಮ್, ‘ಚಾಲಕರು ಹಾಗೂ ಮಾಲೀಕರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ತೈಲ ಸಾಗಣೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಬೆಂಗಳೂರಿನಲ್ಲಿ 1,800ಕ್ಕೂ ಹೆಚ್ಚು ತೈಲ ಹಾಗೂ ಅನಿಲ ಸಾಗಣೆ ಟ್ಯಾಂಕರ್‌ಗಳಿವೆ. ಅದರ ಚಾಲಕರಿಗೆ ದಿನಕ್ಕೆ ₹ 525 ವೇತನವಿದೆ. ಜನರ ದುಡಿಮೆ ಹಾಗೂ ಆರ್ಥಿಕ ಮಟ್ಟವನ್ನು ತಿಳಿದುಕೊಂಡು ದಂಡ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಈಗ ಬೇಕಾಬಿಟ್ಟಿಯಾಗಿ ದಂಡದ ಮೊತ್ತ ಹೆಚ್ಚಿಸಲಾಗಿದೆ. ಚಾಲಕನಿಂದ ₹ 10 ಸಾವಿರದಿಂದ ₹ 35 ಸಾವಿರವರೆಗೂ ವಸೂಲಿ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಅಪಘಾತ ತಡೆಯಲು ರಸ್ತೆಗಳನ್ನು ಮೊದಲು ಸರಿಪಡಿಸಿ. ಸಂಚಾರ ನಿಯಮ ಬಗ್ಗೆ ಅರಿವು ಮೂಡಿಸಿ, ಚಾಲನಾ ಪರವಾನಗಿ ನೀಡುವಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ’ ಎಂದು ಶ್ರೀರಾಮ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.