ADVERTISEMENT

ಜನಾಕ್ರೋಶಕ್ಕೆ ಮಣಿದ ಸರ್ಕಾರ | ನಿಯಮ ಉಲ್ಲಂಘನೆ ದಂಡ ಪ್ರಮಾಣ ಶೀಘ್ರ ಪರಿಷ್ಕರಣೆ?

ಗುಜರಾತ್ ಮಾದರಿ ಪರಿಷ್ಕರಣೆ?

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 9:22 IST
Last Updated 13 ಸೆಪ್ಟೆಂಬರ್ 2019, 9:22 IST
   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಗುಜರಾತ್‌ ಮಾದರಿಯಲ್ಲಿ ದಂಡ ಪ್ರಮಾಣವನ್ನು ಪರಿಷ್ಕರಿಸಲು ಮುಂದಾಗಿದೆ.

ಮೋಟಾರು ವಾಹನ (ತಿದ್ದುಪಡಿ) ಮಸೂದೆ ಜಾರಿ ಬರುತ್ತಿದ್ದಂತೆ ರಾಜ್ಯದ ಎಲ್ಲೆಡೆ ಸಂಚಾರಿ ಪೊಲೀಸರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಭಾರಿ ಮೊತ್ತದ ದಂಡ ವಿಧಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರು ಚರ್ಚೆ ನಡೆಯುತ್ತಿದೆ. ದಂಡದ ಪ್ರಮಾಣವನ್ನು ಇಳಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡವೂ ಹೆಚ್ಚಾಗಿದೆ.

ದುಬಾರಿ ದಂಡ ಪಾವತಿಸಿದ ಕೆಲವರು ನೇರವಾಗಿ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಹಲವು ಸಚಿವರು ಕೂಡ ದಂಡದ ಪ್ರಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾರಿಗೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ದಂಡ ಪ್ರಮಾಣ ಕಡಿಮೆ ಮಾಡುವ ಬಗ್ಗೆ ತಾವೇ ಪ್ರಸ್ತಾಪಿಸಿದರು.

ADVERTISEMENT

‘ದುಬಾರಿ ದಂಡದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ದಂಡದ ಪ್ರಮಾಣವನ್ನು ಇಳಿಸಬೇಕು. ಗುಜರಾತ್‌ನಿಂದ ಆದೇಶ ಪ್ರತಿಯನ್ನು ತರಿಸಿಕೊಂಡು, ದಂಡದ ಪ್ರಮಾಣವನ್ನು ಕೂಡಲೇ ಇಳಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಇದೇ ತಿಂಗಳ ಆರಂಭದಿಂದ ಈ ಕಾನೂನು ರಾಷ್ಟ್ರವ್ಯಾಪಿ ಜಾರಿಗೆ ಬಂದಿದೆ.

ವಾಹನ ಮಾರಾಟ, ನೋಂದಣಿ ಕುಸಿತ: ‘ರಾಜ್ಯದಲ್ಲಿ ವಾಹನ ಮಾರಾಟದಲ್ಲಿ ಕುಸಿತವಾಗಿದೆ. ಅದರಲ್ಲೂ ಸಾರಿಗೆ ಮತ್ತು ಸಾರಿಗೇತರ ವಾಹನ ನೋಂದಣಿ ಶೇ10.34 ರಷ್ಟು ಇಳಿದಿರುವುದರಿಂದ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ. ಅಕ್ಟೋಬರ್‌ ಬಳಿಕ ಮಾರಾಟದಲ್ಲಿ ಸುಧಾರಣೆ ಆಗುವ ವಿಶ್ವಾಸವಿದೆ’ ಎಂದು ಯಡಿಯೂರಪ್ಪ ಸಾರಿಗೆ ಇಲಾಖೆ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಉತ್ತಮ ರಸ್ತೆಗಳಿಂದ ಅಪಘಾತ

ಚಿತ್ರದುರ್ಗ: ‘ರಸ್ತೆಗಳು ಉತ್ತಮವಾಗಿ ಇರುವುದರಿಂದಲೇ ಅಪಘಾತಗಳ ಪ್ರಮಾಣ ಹೆಚ್ಚಿದೆ. ಹೆದ್ದಾರಿಗಳಲ್ಲಿ ಹೆಚ್ಚು ವೇಗವಾಗಿ ವಾಹನಗಳು ಸಂಚರಿಸುತ್ತವೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ‘ರಸ್ತೆ ಉತ್ತಮವಾಗಿದ್ದರೂ ರಾಜ್ಯದಲ್ಲಿ ಪ್ರತಿ ವರ್ಷ 10 ಸಾವಿರ ರಸ್ತೆ ಅಪಘಾತಗಳು ಆಗುತ್ತಿವೆ. ರಸ್ತೆ ದುರಸ್ತಿ ಸೇರಿ ಮೂಲ ಸೌಲಭ್ಯ ಕಲ್ಪಿಸಿದ ಬಳಿಕ ದಂಡ ವಿಧಿಸಬೇಕು ಎಂಬ ವಾದವನ್ನು ಒಪ್ಪುವುದಿಲ್ಲ’ ಎಂದರು.

‘ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣವನ್ನು ಏರಿಕೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ನನ್ನ ಬೆಂಬಲವಿಲ್ಲ’ ಎಂದರು.

ದಂಡದ ಮೊತ್ತ ಕಡಿತ ರಾಜ್ಯಗಳ ವಿವೇಚನೆಗೆ: ನಿತಿನ್‌ ಗಡ್ಕರಿ

ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡದ ಮೊತ್ತವನ್ನು ಆಯಾ ರಾಜ್ಯ ಸರ್ಕಾರಗಳು ಕಡಿತಗೊಳಿಸಬಹುದು ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.

‘ನಮ್ಮ ಉದ್ದೇಶ ಜೀವಗಳನ್ನು ಉಳಿಸುವುದೇ ಹೊರತು, ಆದಾಯ ಗಳಿಸುವುದಲ್ಲ. 10 ವರ್ಷಗಳಲ್ಲಿ ರಸ್ತೆ ಅಪಘಾತಗಳಿಂದ 15 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ವಿವರ ನೀಡಿದ್ದಾರೆ.

ಹಲವು ರಾಜ್ಯಗಳು ದಂಡದ ಮೊತ್ತ ಕಡಿತಕ್ಕೆ ಮುಂದಾಗಿವೆ. ಸಹಾನುಭೂತಿ ಹಾಗೂ ಮಾನವೀಯ ನೆಲೆಯಲ್ಲಿ ಗುಜರಾತ್ ಸರ್ಕಾರವು ದಂಡದ ಮೊತ್ತವನ್ನು ಶೇ 25ರಿಂದ 90ರಷ್ಟು ಕಡಿತಗೊಳಿಸಿದೆ.

ರಾಜ್ಯದಲ್ಲಿ ದುಬಾರಿ ದಂಡ ವಸೂಲಿ ಜಾರಿ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇರಳ ಸರ್ಕಾರವು ಸಂಚಾರ ಮತ್ತು ಕಾನೂನು ಇಲಾಖೆಯಿಂದ ವರದಿ ಕೇಳಿದೆ.

ಬಿಹಾರ ಹಾಗೂ ಒಡಿಶಾ ಸರ್ಕಾರಗಳೂ ದಂಡದ ಮೊತ್ತ ಕಡಿತಕ್ಕೆ ಚಿಂತನೆ ನಡೆಸಿವೆ. ಮಹಾರಾಷ್ಟ್ರ ಸಾರಿಗೆ ಸಚಿವರು ಕೇಂದ್ರಕ್ಕೆ ಪತ್ರ ಬರೆದು ದುಬಾರಿ ದಂಡಕ್ಕೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

* ದಂಡದ ಪ್ರಮಾಣದಿಂದ ತೊಂದರೆ ಆಗಿರುವುದರಿಂದ ಅದನ್ನು ಇಳಿಸಲು ತೀರ್ಮಾನಿಸಿದ್ದೇವೆ. ಮಹಾರಾಷ್ಟ್ರ, ಗುಜರಾತ್‌ನ ಆದೇಶ ಅಧ್ಯಯನ ನಡೆಸಿ ದಂಡ ಇಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ

-ಲಕ್ಷ್ಮಣ ಸವದಿ, ಸಾರಿಗೆ ಸಚಿವ

* ದಂಡದ ಪ್ರಮಾಣ ಕಡಿಮೆ ಮಾಡಬೇಕೆನ್ನುವುದಾದರೆ ಮಾಡಿಕೊಳ್ಳಲಿ. ಆದರೆ ಜನರ ಜೀವವನ್ನು ರಕ್ಷಿಸಬೇಕು, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಬೇಕು

-ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.