ADVERTISEMENT

ಬೆಂಗಳೂರು–ಮಂಗಳೂರು ನಡುವಿನ ಎಲ್ಲಾ ರೈಲು ರದ್ದು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:37 IST
Last Updated 16 ಮಾರ್ಚ್ 2022, 16:37 IST
ರೈಲು
ರೈಲು   

ಬೆಂಗಳೂರು: ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ನಿರ್ವಹಿಸಲು ಗುರುವಾರದಿಂದಲೇ 18 ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.‌

ಸುಬ್ರಹ್ಮಣ್ಯ ರಸ್ತೆ– ಮಂಗಳೂರು ಸೆಂಟ್ರಲ್‌ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು,ಮಂಗಳೂರು ಸೆಂಟ್ರಲ್– ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು(06487/06486) ಮಾ.17ರಿಂದ 20ರವರೆಗೆ ಸಂಚರಿಸುವುದಿಲ್ಲ.

ಪುಣೆ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು(11097/11098) ಮಾ.19ರಂದು ಮತ್ತು 21ರಂದು ರದ್ದಾಗಿದೆ. ಯಶವಂತಪುರ– ಕಾರವಾರ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ(16515/16516) ಮಾ.18 ಮತ್ತು 19ರಂದು ಇರುವುದಿಲ್ಲ.

ADVERTISEMENT

ಯಶವಂತಪುರ–ಮಂಗಳೂರು ಎಕ್ಸ್‌ಪ್ರೆಸ್‌ ರೈಲು(16575/16576) ಮಾ.17 ಮತ್ತು 18ರಂದು ಇರುವುದಿಲ್ಲ. ಯವಂತಪುರ–ಮಂಗಳೂರು ಎಕ್ಸ್‌ಪ್ರೆಸ್‌(16539/16540) ರೈಲು ಮಾ.19 ಮತ್ತು 20ರಂದು ಸಂಚರಿಸುವುದಿಲ್ಲ.

ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್‌(16595/16596), ಯಶವಂತಪುರ–ಕಣ್ಣೂರು ಎಕ್ಸ್‌ಪ್ರೆಸ್‌(16511/16511),ಕೆಎಸ್ಆರ್ ಬೆಂಗಳೂರು - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್(16585/16586)ರೈಲುಗಳು ಸಂಚಾರ ಮಾ.19 ಮತ್ತು 20ರಂದು ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ಗುರುವಾರದಿಂದ ರೈಲು ಸಂಚಾರ ರದ್ದಾಗುವ ಬಗ್ಗೆ ಬುಧವಾರ ಸಂಜೆ ಪ್ರಕಟಣೆ ಹೊರಡಿಸಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ‘ರೈಲು ಮಾರ್ಗದಲ್ಲಿ ತೊಂದರೆ ಕಾಣಿಸಿಕೊಂಡರೆ ಸಂಚಾರವನ್ನು ದಿಢೀರ್ ರದ್ದುಗೊಳಿಸುವುದು ಅನಿವಾರ್ಯ. ಜೋಡಿ ಮಾರ್ಗದ ಕಾಮಗಾರಿ ಕೈಗೊಳ್ಳುವ ಬಗ್ಗೆ ಮೊದಲೇ ಮಾಹಿತಿ ಇರುತ್ತದೆ. ಆದರೂ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿರುವುದು ಏಕೆ’ ಎಂಬುದು ಪ್ರಯಾಣಿಕರ ಪ್ರಶ್ನೆ.

‘ಒಂದು ವಾರ ಮೊದಲೇ ಟಿಕೆಟ್ ಕಾಯ್ದಿರಿಸಿ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ಈಗ ರೈಲು ರದ್ದಾಗಿದೆ ಎಂಬ ಸಂದೇಶ ಬಂದಿದೆ. ಈ ರೀತಿ ಅನಾನುಕೂಲ ಮಾಡುವುದು ಸರಿಯಲ್ಲ’ ಎಂದು ಪ್ರಯಾಣಿಕ ಸತೀಶ್‌ ಆಕ್ರೋಶ ವ್ಯಕ್ತಪಡಿಸಿದರು.

‘ಪಾಲಕ್ಕಾಡು ವಿಭಾಗದಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ರೈಲ್ವೆ ಸಚಿವಾಲಯದಿಂದ ಅನುಮತಿ ಸಿಕ್ಕ ಬಳಿಕವೇ ಪ್ರಕಟಣೆ ಹೊರಡಿಸಬೇಕಾಗುತ್ತದೆ. ಅನುಮತಿ ಸಿಕ್ಕ ಕೂಡಲೇ ದಿಢೀರ್ ನಿರ್ಧಾರ ಕೈಗೊಂಡಿರಬಹುದು. ರೈಲು ಸಂಚಾರ ರದ್ದಾಗಿರುವುದು ತಾತ್ಕಾಲಿಕ ಅಷ್ಟೆ. ಜೋಡಿ ಮಾರ್ಗದ ಕಾಮಗಾರಿ ಒಮ್ಮೆ ಪೂರ್ಣಗೊಂಡರೆ ಅನುಕೂಲ ಆಗಲಿದೆ. ಪ್ರಯಾಣಿಕರು ಸಹಕರಿಸಬೇಕು’ ಎಂದು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.