ADVERTISEMENT

ಹವಾಮಾನ ಬದಲಾವಣೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ: ಸಚಿವ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:21 IST
Last Updated 21 ನವೆಂಬರ್ 2024, 15:21 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಬೆಂಗಳೂರು: ಹವಾಮಾನ ಬದಲಾವಣೆಯ ‘ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ–2’ ರ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಗೆ ಆಯ್ದ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜರ್ಮನ್‌ ಫೌಂಡೇಶನ್ ಹ್ಯಾನ್ಸ್‌ ಸೀಡೆಲ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ರಾಜ್ಯ ಹವಾಮಾನ ಕ್ರಮ ಮತ್ತು ಮೇಲ್ವಿಚಾರಣೆ ಕುರಿತ ನೀತಿ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು.

ADVERTISEMENT

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದು ವಿಶ್ವಕ್ಕೇ ಸವಾಲಾಗಿದೆ. ಇದರ ಪರಿಣಾಮ ಎದುರಿಸಲು ಮತ್ತು ಪರಿಸರದ ಉಳಿವಿಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗುವುದು. ಇದರಿಂದ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಭಾರತ ಸರ್ಕಾರ ಜೂನ್‌ 2008ರಲ್ಲಿ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿತ್ತು. ಹವಾಮಾನ ಸಹ–ಪ್ರಯೋಜನಗಳೊಂದಿಗೆ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ದೀರ್ಘಕಾಲೀನ ಕ್ರಮಗಳಿಗಾಗಿ ನೀತಿ ರೂಪಿಸುವುದು ಅಗತ್ಯವಾಗಿದೆ. ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ–2ಕ್ಕೆ ಹವಾಮಾನ ಬದಲಾವಣೆಯ ರಾಷ್ಟ್ರೀಯ ಪರಾಮರ್ಶನಾ ಸಮಿತಿ ಈಗಾಗಲೇ ಅನುಮೋದನೆ ನೀಡಿದೆ ಎಂದರು.

ಹವಾಮಾನ ಸಂಬಂಧಿತ ವಿಕೋಪಗಳಿಂದ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಆರೋಗ್ಯ ಮುಂತಾದ ಕ್ಷೇತ್ರಗಳು ಬಾಧಿತವಾಗಿವೆ ಎಂದು ಖಂಡ್ರೆ ಹೇಳಿದರು.

ಪರಿಸರ ಶಿಕ್ಷಣ ಕೇಂದ್ರದ ರಜನಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಬಿ.ಪಿ.ರವಿ ಮತ್ತು ಜರ್ಮನ್‌ ಫೌಂಡೇಶನ್ ಹ್ಯಾನ್ಸ್‌ ಸೀಡೆಲ್‌ನ ಸಂದೀಪ್‌ ದುಬೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.