ಚಿತ್ರದುರ್ಗ: ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ ‘ಮೈತ್ರಿ’ ಮಾಸಾಶನ ಯೋಜನೆಗೆ ಸೀರೆ ಉಟ್ಟವರನ್ನು ಮಾತ್ರ ಪರಿಗಣಿಸುತ್ತಿದ್ದು, ಪುರುಷರ ಉಡುಗೆ ಧರಿಸುವವರನ್ನು ಇದರಿಂದ ಹೊರಗೆ ಇಡಲಾಗುತ್ತಿದೆ.
ಮಾಸಾಶನಕ್ಕೆ ಪರಿಗಣಿಸಲು ಕೋರಿ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಕಚೇರಿಗಳಿಗೆ ನಿತ್ಯ ಅಲೆಯುತ್ತಿದ್ದಾರೆ.
‘ಡ್ರೆಸ್‌ಕೋಡ್’ ನೋಡಿ ಅರ್ಜಿ ತಿರಸ್ಕರಿಸುತ್ತಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಇಚ್ಛೆಗೆ ವಿರುದ್ಧವಾದ ಉಡುಗೆ ತೊಡಲು ಹಿಂಜರಿಯುತ್ತಿರುವ ಅನೇಕರು ಮಾಸಾಶನದಿಂದ ವಂಚಿತರಾಗುತ್ತಿದ್ದಾರೆ.
ಹಿಜ್ರಾ, ಕೋಥಿ, ಜೋಗಪ್ಪ, ದ್ವಿಲಿಂಗಿ, ಡಬಲ್ ಡೆಕ್ಕರ್ (ಡಿಡಿ) ಸೇರಿ 800ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲೆಯಲ್ಲಿ ಇದ್ದಾರೆ. ಇವರಲ್ಲಿ 50 ಜನರಿಗೆ ಮಾತ್ರ ‘ಮೈತ್ರಿ’ ಮಾಸಾಶನ ಲಭ್ಯವಾಗುತ್ತಿದೆ. ಸರ್ಕಾರ ರೂಪಿಸಿದ ಮಾನದಂಡ ಹೊಂದಿರದ ಬಹುತೇಕರು ಹೊರಗೆ ಉಳಿಯುತ್ತಿದ್ದಾರೆ.
‘ಹಾವ ಭಾವ ಮಹಿಳೆಯಂತೆ ಇದ್ದರೂ ಸೀರೆ, ಚೂಡಿದಾರತೊಡಲು ಮುಜುಗರವಾಗುತ್ತದೆ ಮೊದಲಿನಿಂದಲೂ ಪುರುಷರ ಬಟ್ಟೆಗಳನ್ನೇ ಧರಿಸಿ ಸಮಾಜದಲ್ಲಿ ಗುರುತಿಸಿಕೊಂಡಿದ್ದೇನೆ. ಸಮಾಜ ಹಾಗೂ ಕುಟುಂಬ ಎದುರಿಸಿ, ಬಯಸಿದಂತೆ ಬದುಕುತ್ತಿದ್ದೇನೆ. ಸರ್ಕಾರದ ಮಾಸಾಶನಕ್ಕಾಗಿ ಉಡುಗೆಯನ್ನು ಬದಲಿಸಲು ಸಾಧ್ಯವಿಲ್ಲ’ ಎಂಬುದು ಲಿಂಗತ್ವ ಅಲ್ಪಸಂಖ್ಯಾತರಾದ ಈರಣ್ಣ ಅಭಿಪ್ರಾಯ.
ಜಿಲ್ಲೆಯಲ್ಲಿ 611 ಕೋಥಿ, 95 ಹಿಜ್ರಾ ಹಾಗೂ ನಾಲ್ವರು ದ್ವಿಲಿಂಗಿಗಳಿದ್ದಾರೆ. ಇವರಲ್ಲಿ 46 ಹಿಜ್ರಾ ಹಾಗೂ 4 ಮಂದಿ ಕೋಥಿಗಳು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಮುದಾಯ ಸಂಸ್ಥೆಯ ನಿರಂತರ ಹೋರಾಟದ ಫಲವಾಗಿ ಪ್ಯಾಂಟ್, ಶರ್ಟ್ ಧರಿಸುವ ಬೆರಳೆಣಿಕೆಯ ಜನರಿಗೆ ತಿಂಗಳಿಗೆ ₹ 600 ‘ಮೈತ್ರಿ’ ಭಾಗ್ಯ ಸಿಕ್ಕಿದೆ.
ಮುಖ್ಯಾಂಶಗಳು
* ಲಿಂಗತ್ವ ಅಲ್ಪಸಂಖ್ಯಾತರನ್ನು ತಲುಪದ ಯೋಜನೆ
* ಇಚ್ಛೆಗೆ ವಿರುದ್ಧವಾದ ಬಟ್ಟೆ ತೊಡಲು ಹಿಂದೇಟು
* ನೀತಿಗೆ ತೀವ್ರ ಅಸಮಾಧಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.