ADVERTISEMENT

ಕೆಐಎಡಿಬಿ ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ: ಸಿಇಒ ಮಹೇಶ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
<div class="paragraphs"><p> ಕೆಐಎಡಿಬಿ ಬಡಾವಣೆ (ಸಂಗ್ರಹ ಚಿತ್ರ)</p></div>

ಕೆಐಎಡಿಬಿ ಬಡಾವಣೆ (ಸಂಗ್ರಹ ಚಿತ್ರ)

   

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕೆ ಪ್ರದೇಶ ಹಾಗೂ ನಾಗರಿಕ ಸೌಲಭ್ಯಗಳಿಗೆ (ಸಿ.ಎ) ಮೀಸಲಿಟ್ಟ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಹೇಳಿದ್ದಾರೆ.

‘ಪ್ರಜಾವಾಣಿ’ಯ ಮಾರ್ಚ್‌ 9ರ ಸಂಚಿಕೆಯಲ್ಲಿ`ಜಮೀನು ಹಂಚಿಕೆಗೆ ಕೆಐಎಡಿಬಿ ತರಾತುರಿ’ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ಅವರು, ಹೂಡಿಕೆ ಪ್ರಸ್ತಾವ, ಹೂಡಿಕೆ ಮೊತ್ತ, ಉತ್ಪಾದನೆ, ರಫ್ತು ಸಾಧ್ಯತೆಗಳು, ಉದ್ಯೋಗ ಸೃಷ್ಟಿ ಇವುಗಳನ್ನು ಗಮನಿಸಿಯೇ ನಿಯಮಾನುಸಾರ ನಿವೇಶನ ಹಂಚಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ಬೆಂಗಳೂರು, ಮೈಸೂರು, ಹಾಸನ, ಕಲಬುರಗಿ, ರಾಯಚೂರು, ಕೋಲಾರ, ಚಾಮರಾಜನಗರ ಸೇರಿದಂತೆ 12 ಕೆಐಎಡಿಬಿ ವಿಭಾಗಗಳಲ್ಲಿ ಹಂಚಿಕೆಯಾಗದಿದ್ದ ಸಿ.ಎ.ನಿವೇಶನಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ಹಂಚಿಕೆ ಮಾಡಲಾಗಿದೆ. ಹಲವೆಡೆ ಸಿ.ಎ ನಿವೇಶನಗಳ ಹಂಚಿಕೆ ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಇದನ್ನು ಇತ್ಯರ್ಥಪಡಿಸಲು 18 ದಿನ ಸಮಯ ಕೊಟ್ಟು ಅರ್ಜಿ ಆಹ್ವಾನಿಸಿತ್ತು. 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತಾದರೂ, ಹಂಚಿಕೆ‌ ಮಾಡಿದ್ದು 41 ನಿವೇಶನಗಳಿಗೆ ಮಾತ್ರ. ಒಂದೇ ಅರ್ಜಿ ಸಲ್ಲಿಕೆಯಾದ ಪ್ರಕರಣಗಳಲ್ಲಿ ಹಂಚಿಕೆಯನ್ನೇ ಮಾಡಿಲ್ಲ.  ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಯಾವ ಅರ್ಜಿಯನ್ನೂ ತಿರಸ್ಕರಿಸಿಲ್ಲ ಎಂದಿದ್ದಾರೆ.

ಸಿ.ಎ. ಮತ್ತು ಅಮೆನಿಟಿ ನಿವೇಶನಗಳ ಹಂಚಿಕೆ ಮಾಡುವಾಗ ಪರಿಶಿಷ್ಟ ಜಾತಿ, ಪಂಗಡಗಳ ಉದ್ಯಮಿಗಳಿಗೆ ಶೇ 24.1 ನಿವೇಶನ ಮೀಸಲಿಟ್ಟಿದ್ದು, ಇಲ್ಲೂ ಸಾಮಾಜಿಕ ನ್ಯಾಯ ಪಾಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಅನುಮೋದನಾ ಸಮಿತಿಯ ಎರಡು ಸಭೆ, ಕೈಗಾರಿಕಾ ಸಚಿವರ ಅಧ್ಯಕ್ಷತೆಯ ಏಕ ಗವಾಕ್ಷಿ ಸಮಿತಿ ಐದು ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಬೆಂಗಳೂರು ಹೊರತುಪಡಿಸಿದ 229 ಯೋಜನೆಗಳಿಗೆ ಮಂಜೂರಾತಿ ನೀಡಿದ್ದು, 2,016 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಸುತ್ತಮುತ್ತ ಹಂಚಿಕೆ ಮಾಡಿರುವುದು 275 ಎಕರೆ ಮಾತ್ರ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.