ADVERTISEMENT

ಸರ್ಕಾರಿ ವೆಚ್ಚದಲ್ಲಿ ಮಕ್ಕಳಿಗೆ ದುಬಾರಿ ‘ಕಸಿ’

ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿಯ ಅತ್ಯಾಧುನಿಕ ಕೇಂದ್ರ

ವರುಣ ಹೆಗಡೆ
Published 1 ಸೆಪ್ಟೆಂಬರ್ 2021, 19:31 IST
Last Updated 1 ಸೆಪ್ಟೆಂಬರ್ 2021, 19:31 IST
   

ಬೆಂಗಳೂರು: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಅಂಗಾಂಗ ಕಸಿಗಳು ಶೀಘ್ರದಲ್ಲಿಯೇ ಸರ್ಕಾರಿ ವೆಚ್ಚದಲ್ಲಿಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬಗಳ ಮಕ್ಕಳಿಗೆದೊರೆಯಲಿವೆ. ಈ ಸಂಬಂಧ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಐಜಿಐಸಿಎಚ್) ಅತ್ಯಾಧುನಿಕ ಕಸಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.

ಅಸ್ಥಿಮಜ್ಜೆ, ಯಕೃತ್ತು, ಮೂತ್ರಪಿಂಡ, ರಕ್ತದ ಆಕರಕೋಶ ಸೇರಿದಂತೆ ವಿವಿಧ ಕಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ₹ 20 ಲಕ್ಷದಿಂದ ₹ 30 ಲಕ್ಷ ಖರ್ಚು ಮಾಡುವ ಪರಿಸ್ಥಿತಿಯಿದೆ. ಸರ್ಕಾರಿ ವ್ಯವಸ್ಥೆಯಡಿ ಮಕ್ಕಳಿಗೆ ಕಸಿ ನಡೆಸಲು ಪ್ರತ್ಯೇಕ ಕೇಂದ್ರ ರಾಜ್ಯದಲ್ಲಿ ಇಲ್ಲ. ಇದರಿಂದಾಗಿ ಈ ಕಸಿಗಳನ್ನು ಮಕ್ಕಳಿಗೆ ಮಾಡಿಸಲು ಬಹುತೇಕ ಕುಟುಂಬಗಳಿಗೆ ಸಾಧ್ಯವಾಗುತ್ತಿರಲಿಲ್ಲ.

ರಾಜ್ಯ ಸರ್ಕಾರವು 2018ರಲ್ಲಿ ಬಿಪಿಎಲ್‌ ಕುಟುಂಬಗಳಿಗಾಗಿ ‘ರಾಜ್ಯ ಅಂಗಾಂಗ ಕಸಿ ಯೋಜನೆ’ ಆರಂಭಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಹೃದಯ ಕಸಿಗೆ ಪ್ರತಿ ರೋಗಿಗೆ ₹ 11 ಲಕ್ಷ, ಮೂತ್ರಪಿಂಡ ಕಸಿಗೆ ₹ 3 ಲಕ್ಷ, ಯಕೃತ್ ಕಸಿಗೆ ₹ 12 ಲಕ್ಷ ಧನಸಹಾಯ ನೀಡಲು ಅವಕಾಶವಿದೆ. 2019ರಲ್ಲಿ ಅಸ್ಥಿಮಜ್ಜೆ ಕಸಿಯನ್ನೂ ಸೇರ್ಪಡೆ ಮಾಡಲಾಗಿದ್ದು, ₹ 21 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಆದರೆ, ಮಕ್ಕಳಿಗಾಗಿಯೇ ಪ್ರತ್ಯೇಕ ಕಸಿ ಕೇಂದ್ರ ಹಾಗೂ ತಜ್ಞ ವೈದ್ಯರು ಇಲ್ಲದಿರುವುದರಿಂದ ಅಂಗಾಗ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದ ಬಹುತೇಕ ಮಕ್ಕಳಿಗೆ ಇದರ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ADVERTISEMENT

1.33 ಎಕರೆ ಪ್ರದೇಶ:ರಾಜ್ಯ ಅಂಗಾಂಶಕಸಿಸಂಸ್ಥೆ (ಸೊಟೊ) ಅಡಿಅಂಗಾಂಗವೈಫಲ್ಯದಿಂದ ಬಳಲುತ್ತಿರುವ 3 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಮಕ್ಕಳು ಕೂಡ ಸೇರಿದ್ದಾರೆ.ಅನುವಂಶಿಕವಾಗಿ ಹರಡುವ ಅಸ್ಥಿಮಜ್ಜೆ ಸಂಬಂಧಿ ರಕ್ತದ ಕಾಯಿಲೆಯಾಗಿರುವ ಥಲಸೇಮಿಯಾಕ್ಕೆ ರಾಜ್ಯದಲ್ಲಿ 5.5 ಸಾವಿರ ಮಂದಿ ಬಳಲುತ್ತಿದ್ದಾರೆ. ದೋಷಪೂರಿತ ವಂಶವಾಹಿಗಳ ಕಾರಣದಿಂದಾಗಿ ಈ ಕಾಯಿಲೆ ತಂದೆ–ತಾಯಿಗಳಿಂದ ಮಕ್ಕಳಿಗೆ ಬರುತ್ತಿದೆ. ಇದಕ್ಕೆ ಅಸ್ಥಿಮಜ್ಜೆ ಕಸಿ ಪರಿಹಾರವಾಗಿದೆ.ಹಾಗಾಗಿ, ಇಂದಿರಾ ಗಾಂಧಿ ಆರೋಗ್ಯ ಸಂಸ್ಥೆಯು 1.33 ಎಕರೆ ಪ್ರದೇಶವನ್ನು ತನ್ನ ಆವರಣದಲ್ಲಿ ಗುರುತಿಸಿ, ಪ್ರತ್ಯೇಕ ಕೇಂದ್ರವನ್ನು ನಿರ್ಮಿಸುತ್ತಿದೆ.

‘ರಾಜ್ಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕಸಿ ಕೇಂದ್ರ ಇರಲಿಲ್ಲ. ಇದರಿಂದಾಗಿ ಹಲವಾರು ಮಕ್ಕಳು ಕಸಿಗಾಗಿ ಎದುರು ನೋಡುತ್ತಿದ್ದಾರೆ. ಮಕ್ಕಳ ಸಮಸ್ಯೆಗೆ ಕೇಂದ್ರವು ಪರಿಹಾರ ಒದಗಿಸಲಿದೆ. ಅತ್ಯಾಧುನಿಕ ಉಪಕರಣಗಳನ್ನು ಈ ಕೇಂದ್ರಕ್ಕೆ ಅಳವಡಿಸಿಕೊಳ್ಳಲಾಗುತ್ತದೆ. ತಜ್ಞ ವೈದ್ಯರನ್ನು ಕೂಡ ಸರ್ಕಾರ ನೇಮಕ ಮಾಡಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಂಜಯ್‌ ಕೆ.ಎಸ್. ತಿಳಿಸಿದರು.

500 ಹಾಸಿಗೆಗಳ ಕೇಂದ್ರ
ಮಕ್ಕಳ ಕಸಿ ಕೇಂದ್ರವನ್ನು ₹ 135 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 11 ಮಹಡಿಯ ಕಟ್ಟಡವು 500 ಹಾಸಿಗೆಗಳನ್ನು ಒಳಗೊಂಡಿರಲಿದೆ. ಇದನ್ನು 18 ತಿಂಗಳಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಸಿ ನಡೆಸಲು ಬೇಕಾದ ವೈದ್ಯಕೀಯ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

*
ಎಲ್ಲರಿಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಕೊಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಕಸಿ ಕೇಂದ್ರವನ್ನು ತೆರೆಯಲಾಗುತ್ತಿದೆ.
-ಡಾ. ಸಂಜಯ್‌ ಕೆ.ಎಸ್., ಐಜಿಐಸಿಎಚ್ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.