ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ₹ 4,000 ಕೋಟಿಯಷ್ಟು ಆದಾಯ ಕೊರತೆ ಉಂಟಾಗಿದ್ದು, ₹ 2,980 ಕೋಟಿ ನಿವ್ವಳ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸಾರಿಗೆ ನಿಗಮಗಳು ಸದ್ಯ ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಬಜೆಟ್‌ನಲ್ಲಿ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿ ಇದ್ದೇವೆ’ ಎಂದರು.
ಆಸನಗಳ ಸಂಖ್ಯೆ ಹೆಚ್ಚಳ: ಕಾಂಗ್ರೆಸ್‌ನ ಆರ್. ಪ್ರಸನ್ನಕುಮಾರ್ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ, ‘ಮ್ಯಾಕ್ಸಿಕ್ಯಾಬ್ ವಾಹನಗಳ ಚಕ್ರತಳದ ಅಳತೆಯ ಆಧಾರದ ಮೇಲೆ ಆಸನಗಳ ಸಂಖ್ಯೆಯನ್ನು 20 ಮತ್ತು 22ಕ್ಕೆ ಹೆಚ್ಚಿಸಲಾಗಿದೆ. ಪರಿಷ್ಕೃತ ಆದೇಶದಂತೆ ತೆರಿಗೆ ಪಾವತಿಸದ ವಾಹನಗಳ ಮಾಲೀಕರ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸುತ್ತಿದ್ದಾರೆ’ ಎಂದು ತಿಳಿಸಿದರು.
ನಿಯಮ ಉಲ್ಲಂಘನೆ ಆರೋಪದಡಿ 2018ರಲ್ಲಿ 2.88 ಲಕ್ಷ ಪ್ರಕರಣ ದಾಖಲಿಸಿದ್ದು, ₹ 3.75 ಕೋಟಿ ದಂಡ ವಿಧಿಸಲಾಗಿದೆ. 2019ರಲ್ಲಿ 4.65 ಲಕ್ಷ ಪ್ರಕರಣಗಳಲ್ಲಿ ₹ 8.80 ಕೋಟಿ ದಂಡ ಮತ್ತು 2020ರಲ್ಲಿ 8.21 ಲಕ್ಷ ಪ್ರಕರಣ ದಾಖಲಿಸಿದ್ದು, ₹ 18.37 ಕೋಟಿ ದಂಡ ವಿಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಶೇ 50ಕ್ಕಿಂತ ಹೆಚ್ಚು ಹುದ್ದೆ ಖಾಲಿ:
ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮಂಜೂರಾದ 6,342 ಹುದ್ದೆಗಳ ಪೈಕಿ ಶೇಕಡ 50ಕ್ಕಿಂತಲೂ ಹೆಚ್ಚು (3,512) ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ವಿಧಾನ ಪರಿಷತ್‌ಗೆ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಜೂರಾದ 2,215 ಹುದ್ದೆಗಳಲ್ಲಿ 985 ಹುದ್ದೆಗಳು ಭರ್ತಿಯಾಗಿದ್ದು, 1,230 ಹುದ್ದೆಗಳು ಖಾಲಿ ಇವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಜೂರಾದ 1,669 ಹುದ್ದೆಗಳ ಪೈಕಿ 786 ಹುದ್ದೆಗಳು ಭರ್ತಿ ಇದ್ದು, 883 ಹುದ್ದೆಗಳು ಖಾಲಿ ಇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ 1,513 ಹುದ್ದೆಗಳ ಪೈಕಿ 811 ಖಾಲಿ ಇವೆ. ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ 945 ಹುದ್ದೆಗಳ ಪೈಕಿ 588 ಖಾಲಿ ಇವೆ ಎಂದು ಉತ್ತರಿಸಿದರು.
ಕಾಲೇಜು ಆರಂಭಕ್ಕೆ ತಡೆ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲದಲ್ಲಿ ಹೊಸ ತೋಟಗಾರಿಕಾ ಕಾಲೇಜು ಆರಂಭಿಸುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ತಡೆ ನೀಡಿದೆ ಎಂದು ತೋಟಗಾರಿಕೆ ಸಚಿವ ಆರ್. ಶಂಕರ್ ಅವರು ಬಿಜೆಪಿಯ ಅರುಣ್ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.