ADVERTISEMENT

ಸಾರಿಗೆ ನಿಗಮಗಳ 1,937 ನೌಕರರ ಅಮಾನತು

ಮುಷ್ಕರನಿರತ 199 ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:41 IST
Last Updated 20 ಏಪ್ರಿಲ್ 2021, 16:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಮುಷ್ಕರನಿರತ ನೌಕರರ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆಯನ್ನು ನಾಲ್ಕೂ ಸಾರಿಗೆ ನಿಗಮಗಳು ಮುಂದುವರಿಸಿವೆ. ಮಂಗಳವಾರ ಒಂದೇ ದಿನ 1,937 ಸಿಬ್ಬಂದಿಯನ್ನು ಅಮಾನತು ಮಾಡಿದ್ದು, 199 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ವೇತನ ಪರಿಷ್ಕರಣೆಯ ಬೇಡಿಕೆ ಮುಂದಿಟ್ಟುಕೊಂಡು ಸಾರಿಗೆ ನಿಗಮಗಳ ನೌಕರರ ಮುಷ್ಕರ ಮಂಗಳವಾರಕ್ಕೆ 14 ದಿನಗಳನ್ನು ಪೂರೈಸಿದೆ. ಈ ಮಧ್ಯೆ ಬಸ್‌ ಸಂಚಾರದಲ್ಲಿ ಮತ್ತಷ್ಟು ಏರಿಕೆಯಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿಯ 26, ಬಿಎಂಟಿಸಿಯ 1,905, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ಇಬ್ಬರು ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಇಕೆಆರ್‌ಟಿಸಿ) ನಾಲ್ವರನ್ನು ಸೇವೆ ಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮುಷ್ಕರ ಆರಂಭವಾದ ದಿನಗಿಂದ ನಾಲ್ಕೂ ನಿಗಮಗಳಲ್ಲಿ ಸೇವೆಯಿಂದ ಅಮಾನತು ಮಾಡಲಾದ ನೌಕರರ ಸಂಖ್ಯೆ 2,941ಕ್ಕೆ ತಲುಪಿದೆ.

ADVERTISEMENT

ಬಿಎಂಟಿಸಿಯ 189,ಕೆಎಸ್‌ಆರ್‌ಟಿಸಿಯ ಎಂಟು ಮತ್ತು ಎನ್‌ಇಕೆಆರ್‌ಟಿಸಿಯ ಇಬ್ಬರು ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ನಾಲ್ಕು ನಿಗಮಗಳಲ್ಲಿ ಈವರೆಗೆ ಒಟ್ಟು 1.174 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿ 100, ಎನ್‌ಡಬ್ಲ್ಯುಕೆಆರ್‌ಟಿಸಿಯ 73 ಮತ್ತು ಎನ್‌ಇಕೆಆರ್‌ಟಿಸಿಯ ಮೂವರು ಟ್ರೈನಿ ಸಿಬ್ಬಂದಿಯನ್ನು ಮಂಗಳವಾರ ಕೈಬಿಡಲಾಗಿದೆ. ಮುಷ್ಕರದಲ್ಲಿ ಭಾಗಿಯಾದ ಕಾರಣಕ್ಕೆ ನಾಲ್ಕೂ ನಿಗಮಗಳಲ್ಲಿ ಸೇವೆಯಿಂದ ಕೈಬಿಡಲಾಗಿರುವ ಟ್ರೈನಿ ನೌಕರರ ಸಂಖ್ಯೆ 995ಕ್ಕೆ ಏರಿಕೆಯಾಗಿದೆ.

‘ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಕೆಎಸ್‌ಆರ್‌ಟಿಸಿಯ 773 ಸಿಬ್ಬಂದಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಲಾಗಿದೆ. ಇದುವರಿಗೆ ನಾಲ್ಕೂ ನಿಗಮಗಳ ಒಟ್ಟು 7,666 ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾಗಿರುವ 56 ಮಂದಿಯ ಅಮಾನತು ಆದೇಶವನ್ನು ರದ್ದುಪಡಿಸಲಾಗಿದೆ’
ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಲ್ಲಿ ಪ್ರತಿಭಟನೆ

ಸಾರಿಗೆ ನಿಗಮಗಳ ನೌಕರರ ಮುಷ್ಕರ 14ನೇ ದಿನ ಪೂರೈಸಿದೆ. ಮಂಗಳವಾರವೂ ರಾಜ್ಯದ ವಿವಿಧೆಡೆ ನೌಕರರು ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಿದರು.

ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಯತ್ನಿಸಿದ ಸಾರಿಗೆ ನಿಗಮಗಳ ನೌಕರರ ಮೇಲೆ ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಲಕಾಲದ ಬಳಿಕ ಬಿಡುಗಡೆ ಮಾಡಲಾಗಿದೆ.

ಬಸ್‌ಗಳ ಮೇಲೆ ಕಲ್ಲು ತೂರಾಟದ ಪ್ರಕರಣಗಳೂ ಮುಂದುವರಿದಿವೆ. ಮಂಗಳವಾರ ಈ ಸಂಬಂಧ ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ. ಬಸ್‌ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲು ಮಾಡಲಾಗಿದೆ.

‘ಆದೇಶ ತಿಳಿದು ಮುಂದಿನ ನಿರ್ಧಾರ’

‘ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನಿಖರವಾಗಿ ಏನು ಹೇಳಿದೆ ಎಂಬುದು ಇನ್ನೂ ನಮಗೆ ತಿಳಿದಿಲ್ಲ. ನ್ಯಾಯಾಲಯದ ಸೂಚನೆ ಮತ್ತು ಅಭಿಪ್ರಾಯದ ವಿವರವನ್ನು ಪಡೆದು, ವಕೀಲರ ಜತೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಹೈಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯದ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನ್ಯಾಯಾಲಯ ಯಾವ ವಿಚಾರದ ಕುರಿತು ಏನು ಹೇಳಿದೆ ಎಂಬುದನ್ನು ಮೊದಲು ನಾವು ತಿಳಿಯಬೇಕು. ಆ ಬಳಿಕವೇ ಮುಂದಿನ ತೀರ್ಮಾನಕ್ಕೆ ಬರುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.