ಗುಬ್ಬಿ: ‘ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ಟ್ರೀ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಯೋಜನೆ ರೂಪಿಸಲಿದೆ’ ಎಂದು ಸಚಿವ ಆರ್.ಶಂಕರ್ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಸಮೀಪದ ಬಿದರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಣ್ಣ ಕೈಗಾರಿಕೆಗಳಿಂದ ಬರವ ಲಾಭದಲ್ಲಿ ಶೇ. 2ರಷ್ಟು ಹಣವನ್ನು ಅರಣ್ಯದ ಅಭಿವೃದ್ಧಿಗೆ ಬಳಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಕೈಗಾರಿಕಾ ಇಲಾಖೆ ಮಾಡಬೇಕು. ಈ ಪಾರ್ಕ್ ಅಭಿವೃದ್ಧಿಗೆ ಒಂದುವರೆ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಯೊಟ್ಟಿಗೆಚರ್ಚಿಸಲಾಗುವುದು. ಇಂತಹ ಪಾರ್ಕ್‍ಗಳು ಪ್ರವಾಸಿ ತಾಣಗಳಾಗಬೇಕಾದರೆ ಪ್ರವೇಶ ಶುಲ್ಕ ಮಾಡುವುದು ಒಳಿತು. ಇದರಿಂದ ನಿರ್ವಹಣೆ ಸುಲಭವಾಗುತ್ತದೆ’ ಎಂದರು.
‘ಅರಣ್ಯ ಪ್ರದೇಶಕ್ಕೆ ಪ್ರವಾಸ ತೆರಳುವ ರಾಜ್ಯದ ಪ್ರೌಢಶಾಲೆಯ 8, 9ನೇ ತರಗತಿ ಮಕ್ಕಳಿಗೆ ₹ 50ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 80 ಪಾರ್ಕ್‍ಗಳು ಉದ್ಘಾಟನೆಗೊಂಡಿವೆ. ಅತಿಹೆಚ್ಚು ಹೊಗೆ ಉಗುಳುವ ವಾಹನ ಹಾಗೂ ಕಾರ್ಖಾನೆಗಳಿಗೆ ಕೈಗಾರಿಕಾ ಇಲಾಖೆ ಕಡ್ಡಾಯವಾಗಿ ನೋಟೀಸ್ ಜಾರಿ ಮಾಡಬೇಕು. ನಮಗೂ ಅಂತಹವರ ಪಟ್ಟಿ ಕೊಟ್ಟರೆ ಅರಣ್ಯ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ. ಬೆಂಗಳೂರಿನ ಜನ ಉಸಿರಾಡಲು ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮೂಲ ಕಾರಣವಾಗಿದ್ದು, ವಾಯುಮಾಲಿನ್ಯ ತಡೆಗಟ್ಟಲು ಮರಗಿಡಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು’ ಎಂದು ತಿಳಿಸಿದರು.
ಸಣ್ಣ ನೀರಾವರಿ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ‘ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಅರಣ್ಯ ಪ್ರದೇಶದೊಳಗೆ ಚೆಕ್ ಡ್ಯಾಂ ನಿರ್ಮಿಸಿದರೆ ಕಾಡುಪ್ರಾಣಿಗಳು ಬದುಕುಳಿಯುತ್ತವೆ. ಹಾಗೂ ಅಂತರ್ಜಲವೂ ಹೆಚ್ಚಲಿದೆ. ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬಹುದು. ಈ ಉದ್ಯಾನವ ಪಕ್ಕದಲ್ಲೇ ಆರು ಪಥದ ಹೆದ್ದಾರಿ ಹೋಗುವುದರಿಂದ ಪ್ರವಾಸಿ ತಾಣವಾಗಲಿದೆ. ಈ ಉದ್ಯಾನವನ ನಿರ್ಮಾಣ ಅರಣ್ಯ ಇಲಾಖೆ ಮಾಡಿರುವ ಅದ್ಭುತ ಕಾರ್ಯ. ಕಾಡು ಉಳಿಸುವ ಕಳಕಳಿ ಅಧಿಕಾರಿಗಳಿಗೆ ಬರಬೇಕಿದೆ. ಬಗರ್ ಉಕುಂ ಜಮೀನು ಪಡೆದ ರೈತರು ಅರಣ್ಯ ಕೃಷಿ ನಡೆಸಿ ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯ ಋಣ ತೀರಿಸಿ’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದ, ಸದಸ್ಯ ಜಿ.ಎಚ್.ಜಗನ್ನಾಥ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಹಾಸನ ವೃತ್ತ ಮುಖ್ಯ ಅರಣ್ಯಾಧಿಕಾರಿ ಎ. ಕೆ.ಸಿಂಹ, ಎ ಸಿಎಫ್ ರಾಮಲಿಂಗೇಗೌಡ, ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಆರ್.ರಮೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ತಾರಕೇಶ್ವರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯ, ಉಪಾಧ್ಯಕ್ಷೆ ಕಲ್ಪನಾ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವರಾಜು, ಉಪಾಧ್ಯಕ್ಷೆ ಗಾಂಗಮ್ಮ, ಸದಸ್ಯರಾದ ಯತೀಶ್, ಗಾಯಿತ್ರಿ, ಈರಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.