ಸುಂಕಸಾಳ (ಅಂಕೋಲಾ): ‘ಅರ್ಧ ಕಿಲೋಮೀಟರ್ ದೂರ ಕ್ರಮಿಸಲು ಆರು ದಿನ ಬೇಕಾಯ್ತು. ಸ್ನಾನವಿಲ್ಲ, ತೊಳೆದ ಬಟ್ಟೆಯಿಲ್ಲ. ಯಾರ‍್ಯಾರೋ ಪುಣ್ಯಾತ್ಮರು ವಾಹನದಲ್ಲಿ ತಂದುಕೊಡುವ ಪುಲಾವ್ ತಿಂದ್ಕೊಂಡು ಬದುಕಿದ್ದೇವೆ...’
ಗಂಗಾವಳಿ ನದಿಯ ಭಾರಿ ಪ್ರವಾಹದಿಂದ ಮುಂದೆ ಹೋಗಲಾಗದೇ ನಿಂತ, ಲಾರಿಗಳ ಚಾಲಕರನ್ನು ಮಾತನಾಡಿಸಿದಾಗ ಸಿಗುವ ಉತ್ತರ ಇದು.
ರಾಷ್ಟ್ರೀಯ ಹೆದ್ದಾರಿ 63 ಅನ್ನು ಸುಂಕಸಾಳದಲ್ಲಿ ಮೊದಲು ಆವರಿಸಿದೆ. ನೆರೆ, ಕ್ರಮೇಣ ಆರು ಕಿ.ಮೀ ದೂರದ ಹೊನ್ನಳ್ಳಿಯವರೆಗೆ ವ್ಯಾಪಿಸಿತು. ಬಸ್, ಟೆಂಪೊಗಳ ಸಂಚಾರವನ್ನು ಮೊದಲೇ ತಡೆಯಲಾಗಿತ್ತು.
ಅದೇ ಹೆದ್ದಾರಿಯಲ್ಲಿ ಲಾರಿಗಳಿಗೆ ಮುಂದೆ ಹೋಗಲಾಗದೇ ಹಿಂದೆಯೂ ಬರಲಾಗದೇ ಚಾಲಕರು ಪರಿತಪಿಸುವಂತಾಯಿತು. ಇದರಿಂದಹೆದ್ದಾರಿಯಂಚಿಗೆ 10 ಕಿ.ಮೀ ಗೂ ಅಧಿಕ ದೂರದವರೆಗೆ ಸಾವಿರಾರು ಲಾರಿಗಳು ಸಾಲುಗಟ್ಟಿದವು.
ಕಾಡಿನ ಮಧ್ಯೆ ಮೊಬೈಲ್ ಸಿಗ್ನಲ್ ಕೂಡ ಸಿಗದ ಕಾರಣತಮ್ಮ ಸಂಕಷ್ಟವನ್ನು ಚಾಲಕರಿಗೆಯಾರೊಂದಿಗೂ ಜೊತೆಗೂ ಹೇಳಿಕೊಳ್ಳಲಾಗಲಿಲ್ಲ. ಮಾಧ್ಯಮಗಳ ವರದಿ ನೋಡಿದ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಮಾಲೀಕರು ಲಾರಿಗಳನ್ನು ಹುಡುಕಿಕೊಂಡು ಬಂದ ಉದಾಹರಣೆಗಳಿವೆ ಎನ್ನುತ್ತಾರೆ ಚಾಲಕರು.
‘ಮನೆಯಲ್ಲಿ ಅಪ್ಪ, ಅಮ್ಮ ಮಾತ್ರ ಇದ್ದಾರೆ. ನಾನು ಒಬ್ಬನೇ ಮಗ. ಮನೆಗೆ ಕಾಲ್ ಮಾಡಿ ನಾಲ್ಕು ದಿನವಾಯ್ತು. ಅಲ್ಲಿ ಮಳೆಯಿದ್ಯಾ, ನಿಮಗೇನಾದರೂ ಮಾಹಿತಿ ಸಿಕ್ಕಿದ್ಯಾ’ ಎಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರಾದ ಯುವ ಲಾರಿ ಚಾಲಕ ಶಶಿ ಕೇಳುತ್ತಿದ್ದರೆ ಮುಖದಲ್ಲಿ ದುಗುಡ ಎದ್ದು ಕಾಣುತ್ತಿತ್ತು.
ಗೋವಾದಿಂದ ಹೈದರಾಬಾದ್, ಚೆನ್ನೈ, ಹುಬ್ಬಳ್ಳಿ, ಬೆಳಗಾವಿ ನಗರಗಳಿಗೆ ಸಾಗುತ್ತಿದ್ದ ಲಾರಿಗಳೆಲ್ಲ ಹೆದ್ದಾರಿಯುದ್ದಕ್ಕೂ ನಿಂತಿವೆ. ಮಂಗಳೂರಿನಿಂದ ಬಂದ ಪೆಟ್ರೋಲಿಯಂ ಗ್ಯಾಸ್, ಪೆಟ್ರೋಲ್, ಡೀಸೆಲ್ ತುಂಬಿರುವ ಟ್ಯಾಂಕರ್‌ಗಳನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಳೆಗುಳಿ ಕ್ರಾಸ್ ಬಳಿಯೇ ತಡೆಯಲಾಗಿದೆ.
ಕೆ.ಜಿ. ಟೊಮೆಟೊಗೆ ₹120!
ದೂರದ ದಾರಿಗಳನ್ನು ಕ್ರಮಿಸುವ ಲಾರಿಗಳ ಚಾಲಕ ಮತ್ತುಸಹಾಯಕರು ತಮ್ಮೊಡನೆ ಅಡುಗೆ ಪರಿಕರಗಳನ್ನೂ ಹೊಂದಿದ್ದಾರೆ. ಅವರು ಲಾರಿಗಳ ಪಕ್ಕದಲ್ಲೇ ಸ್ಟೌ ಹಚ್ಚಿ ಅಡುಗೆ ಮಾಡಿ ಊಟ ಮಾಡುತ್ತಾರೆ.
ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಅಂಗಡಿಗಳಿಂದ ಒಂದು ಕೆ.ಜಿ. ಟೊಮೆಟೊಗೆ ಸದ್ಯ ₹ 120ರಿಂದ ₹ 140, ಸಾದಾ ಅಕ್ಕಿಗೆ ₹70ರಿಂದ ₹ 80, ₹5 ಬೆಲೆ ಬಿಸ್ಕತ್ ಪ್ಯಾಕೇಟ್‌ಗೆ ₹ 20 ಕೊಡಬೇಕಿದೆ ಎಂದುರಮ್ಜಾನ್, ಅನೀಸ್, ಚೆನ್ನೈನ ಸತ್ಯನ್ ಅಸಹಾಯಕತೆ ವ್ಯಕ್ತಪಡಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.