ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ಅಧೀನದಲ್ಲಿರುವ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಕಾಮಗಾರಿಯನ್ನೇ ನಡೆಸದೆ ₹ 55 ಕೋಟಿ ದುರ್ಬಳಕೆ ಮಾಡಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದು, ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ.
ಲಾರಿ ಚಾಲಕರು ಮತ್ತು ಸಿಬ್ಬಂದಿಯ ಬಳಕೆಗಾಗಿ ರಾಜ್ಯದ ವಿವಿಧೆಡೆ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಬಿಡುಗಡೆ ಮಾಡಿದ್ದ ₹55 ಕೋಟಿಯನ್ನು ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಮತ್ತು ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಸೇರಿ ಕಾಮಗಾರಿ ನಡೆಸದೇ ವಿವಿಧ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಕುರಿತು ತನಿಖೆ ಆರಂಭಿಸಲಾಗಿದೆ.
ನೇರ ಹಣ ವರ್ಗಾವಣೆ ಪತ್ತೆ
‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಟ್ರಕ್ ಟರ್ಮಿನಲ್ ಗಳ ನಿರ್ಮಾಣ ಮತ್ತು ಮೂಲ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಸಂಸ್ಥೆಯ ಖಾತೆಯಲ್ಲಿತ್ತು. ಅದನ್ನು ಕಾಮಗಾರಿ ನಡೆಸದೇ ನೇರವಾಗಿ ಪಾವತಿಸಿರುವುದು ಕಡತಗಳ ಪರಿಶೀಲನೆ ವೇಳೆ ತಿಳಿದುಬಂದಿದೆ. ಅಂದಾಜು ಪಟ್ಟಿ, ಕಾಮಗಾರಿ ಮೇಲ್ವಿಚಾರಣಾ ವರದಿ, ತಾಂತ್ರಿಕ, ಆರ್ಥಿಕ ಪರಿಶೀಲನಾ ವರದಿ ಯಾವುದೂ ಇಲ್ಲದೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಚೆಕ್‌ಗೆ ಸಹಿ ಮಾಡಿ ಹಣ ವರ್ಗಾಯಿಸಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕಡತಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಗಿದ ತಕ್ಷಣ, ಹೆಚ್ಚಿನ ಪರಿಶೀಲನೆ ನಡೆಸಲಾಗುವುದು. ಆರೋಪಕ್ಕೆ ಸಂಬಂಧಿಸಿದಂತೆ ಟರ್ಮಿನಲ್ ಅಧ್ಯಕ್ಷರು ಹಾಗೂ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ವಿಚಾರಣೆಯನ್ನೂ ನಡೆಸಲಾಗುತ್ತದೆ. ಬಳಿಕ, ಪ್ರಾಥಮಿಕ ತನಿಖಾ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗುವುದು. ಅಕ್ರಮ ನಡೆದಿರುವುದು ಕಂಡುಬಂದರೆ, ಎಫ್‌ಐಆರ್ ದಾಖಲಿಸಿ, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಆಡಳಿತ ಮಂಡಳಿ ನಿರ್ದೇಶಕರಾಗಿರುವ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳಾದ ಚನ್ನಾರೆಡ್ಡಿ, ಶ್ರೀನಿವಾಸ ರಾವ್, ರಾಮಚಂದ್ರ, ಬಾಷಾ ಮತ್ತು ಸೋಮಸುಂದರ್ ಅವರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಆರಂಭಿಸಿರುವ ಲೋಕಾಯುಕ್ತರು, ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಶಾಂತಿನಗರ ಬಿಎಂಟಿಸಿ ಕಚೇರಿ ಆವರಣದಲ್ಲಿರುವ ದೇವರಾಜ ಅರಸು ಟ್ರಕ್ ಟರ್ಮಿನಲ್ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಶೋಧ ಮಾಡಿದ ಲೋಕಾಯುಕ್ತ ಪೊಲೀಸರು, ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದು, ಕಚೇರಿಗೆ ಬೀಗ ಹಾಕಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದೆ. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.