ADVERTISEMENT

ಕೃಷಿ ವಿ.ವಿ: ಶೇ 50ರಷ್ಟು ಹುದ್ದೆ ಭರ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:58 IST
Last Updated 17 ಸೆಪ್ಟೆಂಬರ್ 2021, 16:58 IST
ಬಿ.ಸಿ.ಪಾಟೀಲ 
ಬಿ.ಸಿ.ಪಾಟೀಲ    

ಬೆಂಗಳೂರು: ರಾಜ್ಯದ ನಾಲ್ಕು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ 864 ಬೋಧಕ ಮತ್ತು 2,604 ಬೋಧಕೇತರ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶೇಕಡ 50ರಷ್ಟು ಹುದ್ದೆಗಳ ಭರ್ತಿಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಇಟಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 212, ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 225, ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 245 ಮತ್ತು ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 182 ಬೋಧಕರ ಹುದ್ದೆಗಳು ಖಾಲಿ ಇವೆ’ ಎಂದರು.

ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ನೇಮಕಾತಿ ವಿಳಂಬವಾಗಿದೆ. ಶೇ 50ರಷ್ಟು ಹುದ್ದೆಗಳನ್ನಾದರೂ ತ್ವರಿತವಾಗಿ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಎಲ್ಲ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಆಗಸ್ಟ್‌ 27ರಂದು ಪತ್ರ ಬರೆದಿದ್ದು, ಕೆಲವು ಮಾಹಿತಿಗಳನ್ನು ಒದಗಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ADVERTISEMENT

‘ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಬೋಧನೆ ಮತ್ತು ಸಂಶೋಧನೆಗೆ ತೀವ್ರ ಅಡಚಣೆಯಾಗಿದೆ. ಆದರೆ, ನೇಮಕಾತಿಗೆ ಸರ್ಕಾರ ಒಲವು ತೋರುತ್ತಿಲ್ಲ. ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಆರು ತಿಂಗಳ ಹಿಂದೆ ಸದನದಲ್ಲಿ ನೀಡಿದ್ದ ಉತ್ತರವನ್ನೇ ಮತ್ತೆ ಒದಗಿಸಲಾಗಿದೆ. ಯಾವ ಬದಲಾವಣೆಯೂ ಆಗಿಲ್ಲ’ ಎಂದು ಬಸವರಾಜ ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಸಹಾಯಧನ ಮುಂದುವರಿಕೆ: ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು, ‘ತುಂತುರು ನೀರಾವರಿ ಅಳವಡಿಕೆಗೆ ಕೇಂದ್ರ ಸರ್ಕಾರದ ನೆರವಿನಲ್ಲಿ ಸಹಾಯಧನ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 90ರಷ್ಟು ಮೊತ್ತ ಭರಿಸುತ್ತಿದ್ದು, ರೈತರು ಶೇ 10ರಷ್ಟು ಮಾತ್ರ ವೆಚ್ಚ ಮಾಡಬೇಕು. ಈ ಯೋಜನೆ ಸ್ಥಗಿತಕ್ಕೆ ಆರ್ಥಿಕ ಇಲಾಖೆ ಸೂಚಿಸಿತ್ತು. ಆದರೆ, 5 ಎಕರೆ ವಿಸ್ತೀರ್ಣದವರೆಗಿನ ಜಮೀನು ಹೊಂದಿರುವ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಸೀಮಿತವಾಗಿ ಸಹಾಯಧನ ಮುಂದುವರಿಸಲಾಗಿದೆ’ ಎಂದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಯೋಜನೆಯಡಿ ₹ 72.34 ಕೋಟಿ ಅನುದಾನ ಒದಗಿಸಲಾಗಿದೆ. ಈ ಯೋಜನೆಯಡಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಸಮಗ್ರ ಕೃಷಿ ಪದ್ಧತಿ ಮಾದರಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

₹ 32.46 ಕೋಟಿ ಅನುದಾನ

‘ಆತ್ಮನಿರ್ಭರ ಭಾರತ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ 2020–21 ರಾಜ್ಯಕ್ಕೆ ₹ 32.46 ಕೋಟಿ ಅನುದಾನ ಒದಗಿಸಿದೆ. ಈ ಯೋಜನೆಯಡಿ ಇದುವರೆಗೆ 393 ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಪ್ರಶ್ನೆ ಕೇಳಿದ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ‘ಸರ್ಕಾರದ ಆರ್ಥಿಕ ನೆರವು ಇಲ್ಲದ ಕಾರಣದಿಂದ ರೈತ ಉತ್ಪಾದಕ ಸಂಸ್ಥೆಗಳು ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ’ ಎಂದು ದೂರಿದರು. ಆದರೆ, ಸಚಿವರು ಈ ಆರೋಪವನ್ನು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.