ಹಿರೇಬಾಗೇವಾಡಿ: ಉತ್ತರ ಕರ್ನಾಟಕ ಅಭಿವೃದ್ಧಿ ಪಡಿಸುತ್ತಿಲ್ಲ ಹಾಗೂ ಪ್ರಮುಖ ಇಲಾಖೆಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುತ್ತಿಲ್ಲವೆಂದು ಆರೋಪಿಸಿದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಸದಸ್ಯರು ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲು ಬುಧವಾರ ಇಲ್ಲಿ ವಿಫಲ ಯತ್ನ ನಡೆಸಿದರು. ಸೂಕ್ತ ಸಮಯದಲ್ಲಿ ಮಧ್ಯೆಪ್ರವೇಶಿಸಿದ ಪೊಲೀಸರು, ಸಮಿತಿಯ ಸದಸ್ಯರನ್ನು ವಶಕ್ಕೆ ಪಡೆದರು.
ಮೊದಲು ಇಲ್ಲಿನ ಬಡಕಲ್ ಬೀದಿಯ ಕಚೇರಿ ಎದುರು ಧ್ವಜಾರೋಹಣ ಮಾಡಲು ಪ್ರಯತ್ನಿಸಿದ್ದರು. ನಂತರ ಚಾವಡಿ ಕೂಟ ಸಮೀಪದ ಹನುಮಾನ ದೇವಸ್ಥಾನದ ಹಿಂದೆ ಧ್ವಜ ಹಾರಿಸಲು ಪ್ರಯತ್ನ ನಡೆಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಧ್ವಜವನ್ನು ಕಿತ್ತುಕೊಂಡರು. ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಡವೇಶ ಇಟಗಿ ಮಾತನಾಡಿ, ‘ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಉತ್ತರ ಕರ್ನಾಟಕ ಅಭಿವೃದ್ದಿಯಾಗುತ್ತಿಲ್ಲ. ಬರೀ ಸುಳ್ಳು ಆಶ್ವಾಸನೆಗಳನ್ನೇ ಎಲ್ಲರೂ ಹೇಳುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ 15 ದಿನಗಳಲ್ಲಿ 9 ಮುಖ್ಯ ಇಲಾಖೆಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದೂ ಸಾಧ್ಯವಾಗಲಿಲ್ಲ. ಪ್ರತ್ಯೇಕ ರಾಜ್ಯವಾದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಾಧುಬರಮಣ್ಣವರ ಮಾತನಾಡಿ, ‘ನಮ್ಮ ಈ ಭಾಗ ಎಳ್ಳಷ್ಟೂ ಅಭಿವೃದ್ಧಿಯಾಗುತ್ತಿಲ್ಲ, ಇಲ್ಲಿನ ಸುವರ್ಣ ವಿಧಾನಸೌಧ ಇಲಿ, ಹೆಗ್ಗಣ, ಹಾವುಗಳ ವಾಸಸ್ಥಾನವಾಗಿದೆ. ಉತ್ತರ ಕರ್ನಾಟಕ ಭಾಗದ ಸಂಸದರು ಮತ್ತು ಶಾಸಕರು ಸ್ಪಂದಿಸುತ್ತಿಲ್ಲ’ ಎಂದು ನುಡಿದರು.
ಯಲ್ಲಪ್ಪ ಕೆಳಗೇರಿ, ಆನಂದ ಪಾಟೀಲ, ಅಡಿವೆಪ್ಪ ತೋಟಗಿ, ಸಂತೋಷ ಕಾಕತಿ, ರವಿ ಗಾಣಗಿ, ಮುಶಪ್ಪ ಉಪ್ಪಾರ, ನಾಗರಾಜ ಉಪ್ಪಾರ, ಸಂತೋಷ ಗಾಣಗಿ, ರಘು ಪಾಟೀಲ, ಗೌಡಪ್ಪ ಹಾದಿಮನಿ, ಸಂದೀಪ ದೇಸಾಯಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.