ಬೆಂಗಳೂರು: ‘ಲೋಕಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಕರ್ನಾಟಕದ ನೀರಾವರಿ ಯೋಜನೆಗಳಾದ ಕೃಷ್ಣಾ, ಕಾವೇರಿ ಅಂತರರಾಜ್ಯ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಲೋಕಸಭೆಯಲ್ಲಿ ಕನ್ನಡಿಗರ ಪರವಾಗಿ ಪ್ರಾಮಾಣಿಕವಾಗಿ ಧ್ವನಿ ಎತ್ತುವೆ’ ಎಂದರು.
‘ಸಂಸದನಾಗಿ ಆಯ್ಕೆಯಾಗಿ ದೆಹಲಿಗೆ ಹೋದರೂ, ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ನಮ್ಮ ವರಿಷ್ಠರು ಅದೇ ಕಾರಣಕ್ಕೆ ಕೆಲವು ನಿರ್ಣಯ ತೆಗೆದುಕೊಂಡಿದ್ದಾರೆ’ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ನಿಯಮಾನುಸಾರ ಮನವಿ ಸಲ್ಲಿಸಬೇಕು. ಹಿಂದೆ ನಾವು ತ್ವರಿತ ನೀರಾವರಿ ಯೋಜನೆಯಡಿ (ಎಐಬಿಪಿ) ಸುಮಾರು ಆರು ತಿಂಗಳು ದೆಹಲಿಯಲ್ಲಿ ನಮ್ಮ ಅಧಿಕಾರಿಗಳನ್ನು ಇಟ್ಟು ಸುಮಾರು ₹ 3,800 ಕೋಟಿ ತಂದಿದ್ದೇವೆ’ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ನಾವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಲ್ಲ. ನಮ್ಮ ಒತ್ತಾಸೆಯ ಕಾರಣಕ್ಕೆ ಈ ಯೋಜನೆಗೆ ವಿಶೇಷವಾಗಿ ₹ 5,000 ಕೋಟಿ ನೀಡುವ ಭರವಸೆ ನೀಡಿತ್ತು. ರಾಜ್ಯದ ಸಚಿವರು ಹಾಗೂ ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತನಾಡಿ ಈ ಹಣ ತರಲು ಪ್ರಯತ್ನಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.