ಬೆಂಗಳೂರು: ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆಯಲ್ಲಿ ಲೋಪಗಳಿದ್ದು, ಅದನ್ನು ಬದಲಾವಣೆಗಳೊಂದಿಗೆ ವಿಧಾನಮಂಡಲದಲ್ಲಿ ಮತ್ತೆ ಮಂಡಿಸಿ, ಅಂಗೀಕಾರ ಪಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕನ್ನಡ ಭಾಷೆ ಬಳಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಪ ಎಸಗುವವರ ವಿರುದ್ಧ ಕ್ರಮ ಜರುಗಿಸುವ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವಂತೆ ಕರಡು ಮಸೂದೆ ರೂಪಿಸಲಾಗಿತ್ತು. ಅದನ್ನು ಬದಲಿಸಿ ಮುಖ್ಯ ಕಾರ್ಯದರ್ಶಿಗೆ ನೀಡಿರುವುದು ಸರಿಯಲ್ಲ' ಎಂದರು.
'ಈಗ ಅಂಗೀಕಾರ ಪಡೆದಿರುವ ಮಸೂದೆಯಲ್ಲಿ ಕಳ್ಳನ ಕೈಗೆ ಅಧಿಕಾರ ಕೊಟ್ಟಂತೆ ಆಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಅಧಿಕಾರ ನೀಡಲಾಗಿದಡ. ಅವರು ಕಾರ್ಯದೊತ್ತಡದಿಂದ ಈ ಕೆಲಸ ಮಾಡುವುದು ಕಷ್ಟ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ನಾಮಕಾವಸ್ಥೆಗೆ ಕನ್ನಡ ಅಭಿವೃದ್ಧಿ ಜಾರಿ ನಿರ್ದೇಶನಾಲಯದ ಸದಸ್ಯರನ್ನಾಗಿ ಮಾಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಈ ಮಸೂದೆಯ ಕುರಿತು ಅನೇಕ ಸಂಘ, ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರ ಮಸೂದೆಯನ್ನು ಹಿಂಪಡೆದು ಬದಲಾವಣೆಗಳೊಂದಿಗೆ ಮರು ಮಂಡನೆ ಮಾಡಬೇಕು' ಎಂದು ಆಗ್ರಹಿಸಿದರು.
ತಮ್ಮ ಅಧಿಕಾರದ ಅವಧಿ ಮುಕ್ತಾಯಗೊಳ್ಳುತ್ತಿದೆ. ಹುದ್ದೆಯಲ್ಲಿ ಮುಂದುವರಿಸುವ ಕುರಿತು ತಿಳಿದಿಲ್ಲ. ಮಸೂದೆಯಲ್ಲಿನ ಲೋಪದ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.