ADVERTISEMENT

ಕರ್ನಾಟಕದಲ್ಲಿ 2ನೇ ಅಧಿಕೃತ ಭಾಷೆಗೆ ತುಳು ಅರ್ಹ: ರಾಜ್ಯ ಸರ್ಕಾರಕ್ಕೆ ಶಿಫಾರಸು

ಡಾ. ಎಂ. ಮೋಹನ ಆಳ್ವ ನೇತೃತ್ವದ ಸಮಿತಿ

ರಾಜೇಶ್ ರೈ ಚಟ್ಲ
Published 25 ಜುಲೈ 2023, 20:58 IST
Last Updated 25 ಜುಲೈ 2023, 20:58 IST
ಶಿವರಾಜ ತಂಗಡಗಿ, ಡಾ.ಎಂ.ಮೋಹನ ಆಳ್ವ
ಶಿವರಾಜ ತಂಗಡಗಿ, ಡಾ.ಎಂ.ಮೋಹನ ಆಳ್ವ   

ಬೆಂಗಳೂರು: ‘ತಮಿಳು– ಕನ್ನಡ ಭಾಷೆಗಳಷ್ಟೇ ಪ್ರಾಚೀನವಾದ, ಭಾಷಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿರುವ ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲು ಅರ್ಹವಾಗಿದೆ’ ಎಂದು ಖಚಿತ ಆಧಾರಗಳ ಸಹಿತ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆಯ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು  ಬಸವರಾಜ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರ‌ವು ಮೋಹನ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ಸಲ್ಲಿಸಿರುವ ಅಧ್ಯಯನ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ದ್ರಾವಿಡ ಭಾಷಾ ವರ್ಗದ, ಪ್ರಾಚೀನ, ಸ್ವತಂತ್ರವೂ ಆದ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ಯುನೆಸ್ಕೋ ವರದಿಯಲ್ಲಿ ನಶಿಸಿ ಹೋಗುತ್ತಿರುವ ಭಾಷಾ ಪಟ್ಟಿಯಲ್ಲಿರುವ ಈ ಭಾಷೆ  ಉಳಿಸಿ, ಬೆಳೆಸಿದ ಮತ್ತು ತುಳುವರಿಗೆ ನೈತಿಕ ಧೈರ್ಯ ತುಂಬಿದ ಶ್ರೇಯ ಸರ್ಕಾರದ್ದಾಗುತ್ತದೆ. ತುಳುವಿಗೆ ಸಂಬಂಧಿಸಿದಂತೆ ಅಕ್ಷರಾಭ್ಯಾಸ ಇಲ್ಲದ ತುಳುವರಿಗೆ ಮತ್ತು ದೇಶ ವಿದೇಶಗಳಿಂದ ಬರುವ ತುಳುವರಿಗೆ ಬ್ಯಾಂಕಿಂಗ್‌ ವ್ಯವಹಾರ, ನ್ಯಾಯಾಂಗ ವ್ಯವಸ್ಥೆ, ವಿವಿಧ ಇಲಾಖೆಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಇದರಿಂದ ಆಡಳಿತ, ವ್ಯವಹಾರಗಳು ಹೆಚ್ಚು ಜನಸ್ನೇಹಿಯಾಗುತ್ತದೆ’ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

ತುಳು ಭಾಷೆಯ ಪ್ರಾಚೀನ– ಆಧುನಿಕ ಸಾಹಿತ್ಯ, ಮೌಖಿಕ ಪರಂಪರೆ, ಹಸ್ತಪ್ರತಿಗಳು, ಇವುಗಳ ಕುರಿತು ನಡೆದಿರುವ ಸಂಶೋಧನೆ, ರಂಗಭೂಮಿ, ಯಕ್ಷಗಾನ, ಸಿನಿಮಾ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಗಳು, ಭಾಷಾ ಬೆಳವಣಿಗೆಗೆ ದುಡಿದಿರುವ ರಾಜ್ಯ, ದೇಶ, ವಿದೇಶಗಳ ವಿದ್ವಾಂಸರು, ಸರ್ಕಾರಿ ಪ್ರಾಯೋಜಿತ ಮತ್ತು ಖಾಸಗಿ ಸಂಘ ಸಂಸ್ಥೆಗಳ ತುಳು ಸಂಬಂಧಿ ಕೆಲಸಗಳನ್ನು ಸೂಕ್ತ ದಾಖಲೆಗಳ ಸಹಿತ ಪರಿಶೀಲಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಸಂವಿಧಾನದ ಅನುಚ್ಛೇದ 345, 346 ಮತ್ತು 347ರ ಅಡಿಯಲ್ಲಿ ರಾಜ್ಯದ ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಅಧಿಕೃತ ಉದ್ದೇಶಗಳಿಗೆ ರಾಜ್ಯ ಸರ್ಕಾರವು ಬಳಸುವ ಸಾಂವಿಧಾನಿಕ ಕಾನೂನು ಮತ್ತು ಕಾನೂನಿನ ಅಡಿಯಲ್ಲಿ ವಿವಿಧ ರಾಜ್ಯಗಳು ಹೆಚ್ಚುವರಿ ಅಧಿಕೃತ ಭಾಷೆಗಳನ್ನಾಗಿ ಮಾನ್ಯ ಮಾಡಿದ ಪಟ್ಟಿಯನ್ನು ಪರಿಶೀಲಿಸಲಾಗಿದೆ. ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದಲ್ಲಿ ‘ಆಳುಪಗಣ ಪಶುಪತಿ’ ಎಂಬವನ ಹೆಸರಿದೆ. ಇತಿಹಾಸಕಾರರು ತಿಳಿಸಿದಂತೆ ತುಳು ರಾಜಮನೆತನ ಆಳುಪ ವಂಶದ ಮೊದಲ ವ್ಯಕ್ತಿ ಈತನೇ. ತುಳು ಭಾಷೆಯಲ್ಲಿ ವಿಫುಲವಾದ ಮೌಖಿಕ–ಲಿಖಿತ ಜ್ಞಾನ ಸಂಪತ್ತಿದೆ. ತುಳುನಾಡಿನ ಜನ ವಿವಿಧ ಉದ್ಯಮಗಳಲ್ಲಿ ತೊಡಗಿ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಹೀಗಿದ್ದೂ ತುಳು ಭಾಷೆಯು ‘ನಗಣ್ಯ’ವಾಗಿ ಉಳಿದಿದೆ ಎಂದೂ ವರದಿಯಲ್ಲಿದೆ.

ಸಮಿತಿಯು ತನ್ನ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅಗತ್ಯ ಇರುವ ಇಲಾಖೆಗಳಿಂದ ಅಭಿಪ್ರಾಯ ಪಡೆದ ಬಳಿಕ ಈ ಕುರಿತು ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ.
–ಶಿವರಾಜ ತಂಗಡಗಿ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತುಳು ಭಾಷಿಕರು ಒಂದು ಕೋಟಿ

ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡಿನಲ್ಲಿ ತುಳು ಭಾಷಿಕರು ಪ್ರಧಾನವಾಗಿ ಇದ್ದಾರೆ. ಬೆಂಗಳೂರು ಮತ್ತು ಇತರ ಎಲ್ಲ ಪ್ರಮುಖ ನಗರಗಳಲ್ಲಿ ಗಣನೀಯ ಸಂಖ್ಯೆಯ ತುಳುವರು ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ಮಹಾರಾಷ್ಟ್ರ (ಮುಂಬೈ ನಗರ ಸಹಿತ) ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಗುಜರಾತ್‌, ಕೇರಳ ಮುಂತಾದ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ತುಳು ಭಾಷಿಕರು ವಲಸೆ ಹೋಗಿ ನೆಲೆಸಿದ್ದಾರೆ. ಯುಎಇ, ಮಧ್ಯಪ್ರಾಚ್ಯ ದೇಶಗಳು, ಇಂಗ್ಲೆಂಡ್‌, ಅಮೆರಿಕ, ಸಿಂಗಪುರ, ಆಸ್ಟ್ರೇಲಿಯಾ, ಯುರೋಪ್‌ನ ರಾಷ್ಟ್ರಗಳಲ್ಲಿ ತುಳುವರಿದ್ದಾರೆ. ಹೀಗೆ ದೇಶ– ವಿದೇಶಗಳಲ್ಲಿ ತುಳುವರು ಮತ್ತು ತುಳು ಸಂಪರ್ಕ ಭಾಷೆಯಾಗಿ ಬಳಸುವವರ ಸಂಖ್ಯೆ ಸುಮಾರು 1 ಕೋಟಿ.

ಸಮಿತಿಯ ವರದಿಯನ್ನು ಪರಿಗಣಿಸಿ, ಸರ್ಕಾರ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕು. ರಾಜಕೀಯರಹಿತವಾಗಿ ಈ ನಿರ್ಧಾರ ಕೈಗೊಳ್ಳಬೇಕು‌.
–ಡಾ.ಎಂ. ಮೋಹನ ಆಳ್ವ, ಸಮಿತಿಯ ಅಧ್ಯಕ್ಷ

ಸಮಿತಿಯ ಪ್ರತಿಪಾದನೆಗಳೇನು?

* ಸುಮಾರು 2,000 ವರ್ಷಗಳ ಹಿಂದೆ ಮೂಲ ದ್ರಾವಿಡದಿಂದ ಪ್ರತ್ಯೇಕಗೊಂಡು ಸ್ವತಂತ್ರವಾದ ಭಾಷೆ

* ಕರಾವಳಿ ಕರ್ನಾಟಕದಲ್ಲಿ ತುಳು ಮಾತೃಭಾಷೆಯ 40ಕ್ಕೂ ಹೆಚ್ಚು ಸಮುದಾಯಗಳಿವೆ

* ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಜೈನರು ತುಳುವನ್ನು ವ್ಯಾವಹಾರಿಕ ಭಾಷೆಯಾಗಿ ಬಳಸುತ್ತಾರೆ. 

* ತುಳು–ಕನ್ನಡ–ಇಂಗ್ಲಿಷ್ ಡಿಕ್ಷನರಿ, ತುಳು ವ್ಯಾಕರಣ, ತುಳು ಪಠ್ಯಪುಸ್ತಕಗಳು, ತುಳು ಜಾನಪದ ಸಂಕಲನಗಳು, ತುಳು ಅನುವಾದಗಳು 150 ವರ್ಷಗಳ ಹಿಂದೆಯೇ ಪ್ರಕಟವಾಗಿವೆ

* ತುಳು ಲಿಪಿ ಮತ್ತು ಪ್ರಾಚೀನ ತುಳು ಸಾಹಿತ್ಯಕ್ಕೆ 600 ವರ್ಷಗಳ ಇತಿಹಾಸವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.