ತುಮಕೂರು/ಚಿಕ್ಕಬಳ್ಳಾಪುರ: ಗಣಿ ಬಾಧಿತ ಪ್ರದೇಶಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿದ್ದು, ದಶಕದ ಹಿಂದೆ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಸಾಗಣೆ ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕಿನ ಬೆಟ್ಟ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯ ಸದ್ದು ಜೋರಾಗಿ ಕೇಳಿಬಂದಿತ್ತು. ಭೂಮಿ ಬಗೆದು ಅದಿರು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಪರಿಸರ ನಾಶವಾಗಿರುವ ಪ್ರದೇಶಗಳಲ್ಲಿ ಇನ್ನೂ ಪುನಶ್ಚೇತನ ಕಾರ್ಯ ಆರಂಭವಾಗಿಲ್ಲ.
ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ಕಾರ್ಯಕ್ಕೆ ಬಳಸಲು ₹2,500 ಕೋಟಿಗೂ ಹೆಚ್ಚು ಹಣವಿದ್ದರೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣ ಬಳಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇದ್ದು, ತೀರ್ಪಿಗಾಗಿ ಕಾಯಲಾಗುತ್ತಿದೆ.
ಕಬ್ಬಿಣದ ಅದಿರು ತೆಗೆಯುವುದು ಹಾಗೂ ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಕಲ್ಲು ಗಣಿಗಾರಿಕೆ ಚುರುಕು ಪಡೆದುಕೊಂಡಿದೆ.
300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅನುಮತಿ ಪಡೆದು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಆದರೆ, ಯಾವ ಬೆಟ್ಟವನ್ನೂ ಬಿಡದಂತೆ ಗಣಿಗಾರಿಕೆ ವ್ಯಾಪಿಸಿಕೊಂಡಿದ್ದು, ಅನಧಿಕೃತವಾಗಿಯೇ ನೂರಾರು ಪ್ರದೇಶಗಳಲ್ಲಿ ಗಣಿಗಾರಿಕೆ ನಡೆದಿದೆ.
176 ಪರವಾನಗಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ನಡೆಸಲು ಒಟ್ಟು 176 ಪರವಾನಗಿ ನೀಡಲಾಗಿದೆ. ಇವುಗಳಲ್ಲಿ 113 ಗಣಿ ಮತ್ತು ಕ್ರಷರ್‌ಗಳು ಸಕ್ರಿಯವಾಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿಯೇ ಕಲ್ಲು ಗಣಿಗಾರಿಕೆಗೆ 107 ಪರವಾನಗಿ ನೀಡಲಾಗಿದೆ.
ವಿಮಾನ ನಿಲ್ದಾಣದ ಸುತ್ತಮುತ್ತ:ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ 25 ಕಿ.ಮೀ ವ್ಯಾಪ್ತಿಯ ಸರ್ಕಾರಿ ಜಮೀನುಗಳಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಅರಣ್ಯೀಕರಣ ಮಾಡುವ ಬಗ್ಗೆ ಲೋಕ್ ಅದಾಲತ್‌ನಲ್ಲಿ ಒಪ್ಪಿಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ₹ 1 ಕೋಟಿ ಖರ್ಚು ಮಾಡಲಾಗಿದೆ.
ಕಲ್ಲಿನ ಕ್ವಾರಿ ಮತ್ತು ಕ್ರಷರ್‌ಗಳಿಂದ ಹೊರಬರುವ ದೂಳು ಮತ್ತು ಕಲ್ಲಿನ ಕಣಗಳಿಂದ ಅಕ್ಕಪಕ್ಕದ ಜಮೀನಿನ ಬೆಳೆಗಳಿಗೆ ಹಾನಿಯಾಗದಂತೆ ನಿಗದಿತ ಎತ್ತರದ ತಡೆಗೋಡೆ ನಿರ್ಮಿಸಿಕೊಂಡಿಲ್ಲ. ಕ್ವಾರಿಗಳು ಮತ್ತು ಕ್ರಷರ್‌ಗಳಿಂದ ಹೊರಬರುವ ದೂಳಿನ ನಿಯಂತ್ರಣಕ್ಕೆ ಸ್ಪ್ರಿಂಕರ್ ಅಳವಡಿಸಿ ನೀರು ಸಿಂಪಡಿಸುತ್ತಿರುವುದಿಲ್ಲ, ಕ್ವಾರಿಗಳು ಮತ್ತು ಕ್ರಷರ್‌ಗಳಿಂದ ಹೊರಬರುವ ದೂಳು ಫಸಲಿನ ಮೇಲೆ ಕುಳಿತು ಬೆಳೆ ನಷ್ಟಕ್ಕೆ ಕಾರಣವಾಗಿದೆ ಎಂಬುದು ರೈತರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.